ಮುಂಬಯಿ: ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿ(Asia Cup 2023) ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೇಪಾಳ ನಡುವೆ ಟೂರ್ನಿ ನಡೆಯಲಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದೆ ಉಳಿದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತ ತನ್ನ ಪಾಲಿನ ಪಂದ್ಯಗಳನ್ನು ಲಂಕಾದಲ್ಲಿ ಆಡಲಿದೆ. ಇದೀಗ ಈ ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಶುಭ ಸುದ್ದಿಯೊಂದು ಲಭಿಸಿದೆ. ಗಾಯದಿಂದಾಗಿ ದೀರ್ಘಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ವಿಶ್ವದ ಮಾಜಿ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಏಷ್ಯಾಕಪ್ನಲ್ಲಿ ಭಾರತ ಪರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆಗೆ ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್(shreyas iyer) ಕೂಡ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಜಸ್ಪ್ರೀತ್ ಬುಮ್ರಾ ಅವರು ಸರಿ ಸುಮಾರು ಒಂದುವರೆ ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಟಿ20 ವಿಶ್ವ ಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಅವರ ಸೇವೆ ಸಿಗದೆ ದೊಡ್ಡ ಹೊಡೆತ ಬಿದ್ದಿತ್ತು. ಇದೀಗ ಏಷ್ಯಾ ಕಪ್ಗೆ ಮರಳುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಭಾರತದ ಬೌಲಿಂಗ್ ಮತ್ತಷ್ಟು ಬಲಗೊಂಡು ತಂಡದ ಆತ್ಮವಿಶ್ವಾಸವೂ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ R Ashwin: ವಿಶ್ವ ಟೆಸ್ಟ್ ಫೈನಲ್ನಲ್ಲಿ ಅವಕಾಶ ಸಿಗದ ಬಗ್ಗೆ ಕೊನೆಗೂ ಮೌನ ಮುರಿದ ಆರ್.ಅಶ್ವಿನ್
ಇದೇ ವರ್ಷ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್(border gavaskar trophy) ಟೆಸ್ಟ್ ಸರಣಿಯ ಅಂತಿಮ ಪಂದ್ಯದ ವೇಳೆ ಬೆನ್ನುನೋವಿನ ಸಮಸ್ಯೆಗೆ ಸಿಲುಕಿ ಐಪಿಎಲ್ ಸೇರಿ ವಿಶ್ವ ಟೆಸ್ಟ್ ಫೈನಲ್ ಪಂದ್ಯದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಕೂಡ ಸಂಪೂರ್ಣ ಚೇತರಿಕೆ ಕಂಡಿದ್ದು ಏಷ್ಯಾ ಕಪ್ಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ನಡೆಯುವ ವಿಂಡೀಸ್ ವಿರುದ್ಧದ ಸರಣಿಗೂ ಅವರು ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಉಭಯ ಆಟಗಾರರ ರೀ ಎಂಟ್ರಿಯಿಂದ ತಂಡ ಬಲಿಷ್ಠಗೊಳ್ಳಲಿದೆ.