Site icon Vistara News

Team India : ಶ್ರೇಯಸ್​ ಅಯ್ಯರ್​, ರಾಹುಲ್​ ರೆಡಿ; ಹೊಸ ವಿಡಿಯೊ ಹಾಕಿದ ರಿಷಭ್​ ಪಂತ್​

KL Rahul

ಬೆಂಗಳೂರು: ಭಾರತ ಕ್ರಿಕೆಟ್​ ತಂಡ (Team India) ಪ್ರಮುಖ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಏಷ್ಯಾಕಪ್​ 2023ಕ್ಕೆ ಮುಂಚಿತವಾಗಿ ಭಾರತ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಗಾಯದ ಸಮಸ್ಯೆಗಳಿಂದ ನರಳಿದ್ದ ಈ ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದರು. ಇದೀಗ ಅವರಿಬ್ಬರೂ ಫುಲ್​ ಫಿಟ್​ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಇದೀಗ ವಿಕೆಟ್​ಕೀಪರ್ ಬ್ಯಾಟರ್​ ರಿಷಭ್ ಪಂತ್ ಸೋಮವಾರ ಈ ಬಗ್ಗೆ ವಿಡಿಯೊ ಮಾಹಿತಿಯೊಂದನ್ನು ಪ್ರಕಟಿಸಿದ್ದಾರೆ. ಶ್ರೇಯಸ್ ಮತ್ತು ರಾಹುಲ್ ಪೂರ್ಣ ಪ್ರಮಾಣದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೊ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.

ಈ ಮೂಲಕ ಗಾಯದ ಸಮಸ್ಯೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾಸಿಟಿವ್​ ಸುದ್ದಿ ಸಿಕ್ಕಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ನೈಜ ಆಟವನ್ನು ಪ್ರಾರಂಭಿಸಿದ್ದಾರೆ. ಸೋಮವಾರ ಎನ್​ಸಿಎನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆಗಳಿವೆ ಹಾಗೂ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.

ರಿಷಭ್ ಪಂತ್ ಹಂಚಿಕೊಂಡ ಸ್ಟೋರಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರೂ ಆಟಗಾರರು ನೆಟ್​​ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದರೂ, ಮುಂದಿನ ಹಂತದಲ್ಲಿ ಕೆಲವೊಂದು ಟೆಸ್ಟ್​​ಗಳನ್ನು ಪಾಸಾಗಬೇಕಾಗಿದೆ. ರಾಹುಲ್ ಮತ್ತು ಶ್ರೇಯಸ್ ಆರಂಭದಲ್ಲಿ ಏಷ್ಯಾ ಕಪ್ ಆಯ್ಕೆಯಿಂದ ವಂಚಿತರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅವರ ಬ್ಯಾಟಿಂಗ್​ಗೆ ಮರಳಿರುವ ಕಾರಣ ಲಭ್ಯರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್​​ ಏಷ್ಯಾ ಕಪ್​ಗೆ ಮುಂದಿನ ವಿಶ್ವ ಕಪ್​ನಲ್ಲಿ ಆಡಬೇಕಾಗಿರುವ ತಂಡವನ್ನೇ ಕಣಕ್ಕೆ ಇಳಿಸುವ ಯೋಜನೆ ರೂಪಿಸಿದೆ. ಶ್ರೇಯಸ್ ಮತ್ತು ರಾಹುಲ್ ಇಬ್ಬರೂ ದೀರ್ಘಕಾಲದ ಚೇತರಿಕೆಯ ಕಾರಣಕ್ಕೆ ಈ ಯೋಜನೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದೀಗ ಇಬ್ಬರೂ ನೆಟ್ಸ್​​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರೂ ಮ್ಯಾನೇಜ್ಮೆಂಟ್ ಅವರ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಈ ವಾರ ಏಷ್ಯಾ ಕಪ್​ ತಂಡ ಪ್ರಕಟ

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ವಾರ ಏಷ್ಯಾಕಪ್ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆಗಸ್ಟ್ ಅಂತ್ಯದಲ್ಲಿ ಶ್ರೀಲಂಕಾಕ್ಕೆ ತೆರಳುವ ಮೊದಲು ಆಟಗಾರರು ಆಗಸ್ಟ್ 23 ರಂದು ಎನ್​​ಸಿಎನಲ್ಲಿ ಶಿಬಿರಕ್ಕಾಗಿ ಒಟ್ಟುಗೂಡಲಿದ್ದಾರೆ. ಇದೇ ಅವಧಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಫಿಟ್ನೆಸ್ ಕೂಡ ಪರೀಕ್ಷೆಗೆ ಒಳಪಡಲಿದೆ.

ಇದನ್ನೂ ಓದಿ : Ind vs WI T20: ʼನೀನು ಧೋನಿ ಅಲ್ಲ!ʼ ಸಿಕ್ಸ್‌ ಹೊಡೆದು ತಂಡ ಗೆಲ್ಲಿಸಿದರೂ ಹಾರ್ದಿಕ್‌ ಪಾಂಡ್ಯ ʼಸ್ವಾರ್ಥಿʼ ಅನಿಸಿಕೊಂಡದ್ದೇಕೆ?

ಕೆಲವು ಆಟಗಾರರು ಗಾಯದ ಸಮಸ್ಯೆಯಿಂದ ಹಿಂದಿರುಗುವ ಸಾಧ್ಯತೆಗಳಿವೆ. ನಾವು ಅವರಿಗೆ ಏಷ್ಯಾ ಕಪ್ ಕ್ರಿಕೆಟ್​ನಲ್ಲಿ ಆಡಲು ಅವಕಾಶಗಳನ್ನು ನೀಡಬೇಕಾಗಿದೆ. ಈ ಹಂತದಲ್ಲಿ ನಾವು ಏಷ್ಯಾ ಕಪ್ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ. ಆಗಸ್ಟ್ 23ರಿಂದ ನಾವು ಬೆಂಗಳೂರಿನಲ್ಲಿ ಒಂದು ವಾರದ ಶಿಬಿರವನ್ನು ನಡೆಯಲಿದೆ. ನಾವು ಅಲ್ಲಿ ಒಂದು ತಂಡವಾಗಿ ಒಟ್ಟುಗೂಡುತ್ತೇವೆ. ಅಲ್ಲಿನ ನಿರ್ಧಾರ ಅಂತಿಮವಾಗಲಿದೆ ಎಂದು ರಾಹುಲ್ ದ್ರಾವಿಡ್ ಭಾರತ ಮತ್ತು ವಿಂಡೀಸ್ ಸರಣಿಯ ನಂತರ ಹೇಳಿದ್ದಾರೆ.

ರಾಹುಲ್ ಹಾಗೂ ಶ್ರೇಯಸ್​ ಅವಕಾಶ ತಪ್ಪಿಸಿಕೊಂಡರೆ ಆಯ್ಕೆ ಸಮಿತಿಯ ತಂತ್ರ ವಿಭಿನ್ನವಾಗಿರಲಿದೆ. ಸೂರ್ಯಕುಮಾರ್ ಯಾದವ್ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಆದರೆ ಅವರು 50 ಓವರ್​ಗಳ ಸ್ವರೂಪದಲ್ಲಿ ನಿಜವಾಗಿಯೂ ಹೆಣಗಾಡುತ್ತಿದ್ದಾರೆ. ತಿಲಕ್ ವರ್ಮಾ ಗೆಲ್ಲುವ ಕುದುರೆಯಾಗಿ ಹೊರಹೊಮ್ಮಿದ್ದಾರೆ.

Exit mobile version