ಕೊಲಂಬೊ: ಪಾಕಿಸ್ತಾನ(IND vs PAK) ವಿರುದ್ಧದ ಏಷ್ಯಾಕಪ್(Asia Cup 2023) ಸೂಪರ್-4 ಪಂದ್ಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಬೆನ್ನು ನೋವಿನ ಗಾಯಕ್ಕೆ ತುತ್ತಾಗಿ ಪಾಕ್ ಮತ್ತು ಶ್ರೀಲಂಕಾ(IND vs SL) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್(Shreyas Iyer) ಮತ್ತೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಶುಕ್ರವಾರ ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯಕ್ಕಾಗಿ ತಂಡದ ಆಟಗಾರರೊಂದಿಗೆ ಅಯ್ಯರ್ ಕೂಡ ಕೆಲ ಕಾಲ ಅಭಾಸ್ಯ ನಡೆಸಿದ್ದಾರೆ. ಈ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಯೂ ಅಧಿಕವಾಗಿದೆ.
6 ತಿಂಗಳ ಬಳಿಕ ಕ್ರಿಕೆಟ್‌ಗೆ ಮರಳಿದ್ದ ಅಯ್ಯರ್
ಆಸ್ಟ್ರೇಲಿಯಾ ವಿರುದ್ಧದ ತವರಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಅಯ್ಯರ್ ಗಾಯಗೊಂಡು ಸುಮಾರು ಆರು ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದರು. ಬಳಿಕ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ಪಾಸ್ ಆಗಿ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದರು. ಪಾಕ್ ವಿರುದ್ಧದದ ಲೀಗ್ ಪಂದ್ಯದಲ್ಲಿ 14 ರನ್ ಗಳಿಸಿದ್ದರು. ನೇಪಾಳ ವಿರುದ್ಧ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಸೂಪರ್ 4 ಪಂದ್ಯಕ್ಕೂ ಮುನ್ನ ಮತ್ತೆ ಬೆನ್ನು ನೋವಿನ ಗಾಯಕ್ಕೀಡಾದರು. ಹೀಗಾಗಿ ಅವರ ಬದಲು ಕೆ.ಎಲ್ ರಾಹುಲ್ ಆಡಿದ್ದರು.
ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆಯುವ ಅಂತಿಮ ಪಂದ್ಯದಲ್ಲಿ ಅಯ್ಯರ್ ಅವರು ಆಡುವ ಸಾಧ್ಯತೆ ಇದೆ. ಈಗಾಗಕಲೇ ಭಾರತ ತಂಡ ಫೈನಲ್ ಪ್ರವೇಶಿಸಿದ ಕಾರಣ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ವಿಶ್ವಕಪ್ಗೂ ಬೆಂಚ್ ಸಾಮರ್ಥ್ಯವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಸೂರ್ಯಕುಮಾರ್ಗೂ ಬಾಂಗ್ಲಾ ವಿರುದ್ಧ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮತ್ತೆ ಗಾಯಗೊಂಡರೆ ಬದಲಿ ಆಟಗಾರ
ಶ್ರೇಯಸ್ ಅಯ್ಯರ್ ಅವರು ಒಂದೊಮ್ಮೆ ಮತ್ತೆ ಗಾಯಗೊಂಡರೆ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಟ್ಟು ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
🗣️ "Extremely happy with the way Hardik Pandya has bowled."#TeamIndia Bowling Coach Paras Mhambrey heaps praise on @hardikpandya7's bowling 👌 pic.twitter.com/1HEDJy122K
— BCCI (@BCCI) September 14, 2023
ತಿಲಕ್ ವರ್ಮ ಮೊದಲ ಆಯ್ಕೆ
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ತಿಲಕ್ ವರ್ಮ(Tilak Varma) ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದೇ ಕಾರಣಕ್ಕೆ ಅವರನ್ನು ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿತ್ತು. ಆದರೆ ಇಲ್ಲಿ ಆಡುವ ಅವಕಾಶ ಇದುವರೆಗೆ ಸಿಕ್ಕಿಲ್ಲ. ಇದೀಗ ಆಯ್ಕೆ ಸಮಿತಿ ಗಾಯಗೊಂಡ ಅಯ್ಯರ್ ಬದಲಿಗೆ ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರನ್ನು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಅವರಿಗೆ ಅವಕಾಶ ನೀಡಲು ಮುಂದಾಗಿದೆ. ಅಯ್ಯರ್ ಮತ್ತೆ ಗಾಯಗೊಂಡರೆ ತಿಲಕ್ ಅವರು ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ.
ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 44 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.6 ಸರಾಸರಿಯಲ್ಲಿ 1645 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಆದರೆ ಗಾಯ ಮಾತ್ರ ಅವರಿಗೆ ಬೆನ್ನು ಬಿಡುವಂತೆ ಕಾಣುತ್ತಿಲ್ಲ.