ಮುಂಬಯಿ: ಟೀಮ್ ಇಂಡಿಯಾದ ಪ್ರತಿಭಾನ್ವಿತ ಯುವ ಬ್ಯಾಟರ್ ಶುಭ್‌ಮನ್ ಗಿಲ್(shubman gill) ಕಿವೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಗಿಲ್ ಅವರ ಬ್ಯಾಟಿಂಗ್ ಕಂಡ ವಿರಾಟ್ ಕೊಹ್ಲಿ(Virat Kohli), ಮೆಚ್ಚುಗೆ ವ್ಯಕ್ತಪಡಿಸಿದ್ದು, ಭವಿಷ್ಯದ ತಾರೆ ಎಂದು ಬಣ್ಣಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಶತಕ ಬಾರಿಸುವ ಜತೆಗೆ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸದ್ಯ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ದಾಖಲೆ ಬರೆಯುತ್ತಿರುವ ಶುಭಮನ್ ಗಿಲ್ ಅವರನ್ನು ಭವಿಷ್ಯದ ತಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಶತಕ ಬಾರಿಸಿದ್ದಾಗ ಅಭಿನಂದಿಸಿದ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ವಿರಾಟ್ ಕೊಹ್ಲಿ “ಭವಿಷ್ಯದ ತಾರೆ ಇಲ್ಲಿದೆ” ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿದಾಗ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮ್ಮ ಈ ಗುಣ ಎಲ್ಲರಿಗೂ ಮಾದರಿಯಾಗಲಿ ಎಂದು ಕಮೆಂಟ್ ಮಾಡಿದ್ದಾರೆ.
ಶುಭಮನ್ ಗಿಲ್ ಈ ಪಂದ್ಯದಲ್ಲಿ 66 ಎಸೆತ ಎದುರಿಸಿ 12 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ಮೂಲಕ ಅಜೇಯ 126 ರನ್ ಬಾರಿಸಿದರು. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಒಟ್ಟಾರೆ ಗಿಲ್ ಅವರು ಪ್ರಸಕ್ತ ಕ್ರಿಕೆಟ್ನ ಬ್ಯಾಟಿಂಗ್ ಸೆನ್ಸೇಷನಲ್ ಆಗಿ ಕಾಣಿಸಿಕೊಂಡಿದ್ದಾರೆ.