ದುಬೈ: ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಹಾಗೂ ಟಿ 20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ತಂಡದ ಇಬ್ಬರು ಆಟಗಾರಯ ಐಸಿಸಿಯ ಜನವರಿ ತಿಂಗಳ ಉತ್ತಮ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಆ ಇಬ್ಬರು ಆಟಗಾರರು. ಇವರ ಜತೆಗೆ ನ್ಯೂಜಿಲ್ಯಾಂಡ್ನ ಡೆವೋನ್ ಕಾನ್ವೆ ಕೂಡ ಸ್ಪರ್ಧೆಯಲ್ಲಿದ್ದಾರೆ.
ಶುಭ್ಮನ್ ಗಿಲ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 207 ರನ್ ಬಾರಿಸಿದ್ದರೆ, ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಅಮೋಘ ಒಂದು ದ್ವಿಶತಕ ಹಾಗೂ ಒಂದು ಶತಕದ ನೆರವಿನಿಂದ 360 ರನ್ ಬಾರಿಸಿದ್ದರು. ಟಿ20 ಸರಣಿಯಲ್ಲಿ ಒಂದು ಶತಕದ ಸಮೇತ ಮೂರು ಪಂದ್ಯಗಳಲ್ಲಿ 144 ರನ್ ಗಳಿಸಿದ್ದರು. ಈ ಎಲ್ಲ ಕಾರಣಗಳಿಗೆ ಅವರನ್ನು ತಿಂಗಳ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಇದೇ ವೇಳೆ ವಿಶ್ವದ ನಂಬರ್ ಒನ್ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದರು. ಅವರು ಮೂರು ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು. ಅದೇ ರೀತಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡು ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ: Virat Kohli: ಶುಭ್ಮನ್ ಗಿಲ್ ಭವಿಷ್ಯದ ಕ್ರಿಕೆಟ್ ತಾರೆ; ವಿರಾಟ್ ಕೊಹ್ಲಿ ವಿಶ್ವಾಸ
ನ್ಯೂಜಿಲ್ಯಾಂಡ್ ಬ್ಯಾಟರ್ ಡೆವೋನ್ ಕಾನ್ವೆ ಕೂಡ ಉತ್ತರ ರೀತಿಯಲ್ಲಿ ಬ್ಯಾಟ್ ಮಾಡಿದ್ದರು. ಅವರು ಏಕ ದಿನ ಸರಣಿಯಲ್ಲಿ 155 ರನ್ ಬಾರಿಸಿದ್ದರು. ಅಲ್ಲದೆ, ಜನವರಿ ತಿಂಗಳಲ್ಲಿ ಒಟ್ಟು ಮೂರು ಶತಕಗಳನ್ನು ಬಾರಿಸಿದ್ದಾರೆ.