Site icon Vistara News

Team India : ಗಿಲ್​ ಯಾರಂತೆ ಆಡುತ್ತಾರೆ; ಸಚಿನ್​ ಅಥವಾ ಕೊಹ್ಲಿ? ಮೊಹಮ್ಮದ್ ಕೈಫ್​​ ನೀಡಿದ್ದಾರೆ ಉತ್ತರ​​

Shubhman Gill

ಮುಂಬಯಿ: ಭಾರತ ತಂಡದ (Team India) ಆರಂಭಿಕ ಬ್ಯಾಟರ್ ಶುಭ್​ಮನ್​ ಗಿಲ್​​(Shubhman GIll) ಅದ್ಬುತ ಫಾರ್ಮ್​ನಲ್ಲಿದ್ದಾರೆ. ಅವರ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್​ ಕ್ಷೇತ್ರವೇ ಶಹಬ್ಬಾಸ್​ ಎನ್ನುತ್ತಿದೆ. ಇವೆಲ್ಲದರ ನಡುವೆ ಗಿಲ್ ಅವರ ಬ್ಯಾಟಿಂಗ್ ಭಾರತ ತಂಡದ ರನ್​ ಮಾಂತ್ರಿಕರಾದ ವಿರಾಟ್​ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್​ಗೆ ಹೋಲಿಕೆಯಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ. ಆದರೆ ಭಾರತ ತಂಡದ ಮಾಜಿ ಬ್ಯಾಟರ್​ ಮೊಹಮ್ಮದ್ ಕೈಫ್​ ಅವರ ಪ್ರಕಾರ ಶುಭ್​ಮನ್​ ಗಿಲ್ ಅವರ ಬ್ಯಾಟಿಂಗ್ ತಂತ್ರವು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಸಮೀಪವಿದೆ.

ಐಪಿಎಲ್ 2023ರಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ 17 ಪಂದ್ಯಗಳಲ್ಲಿ 890 ರನ್ ಗಳಿಸುವ ಮೂಲಕ ನಾಲ್ಕು ಅರ್ಧ ಶತಕಗಳು ಮತ್ತು ಮೂರು ಶತಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದಲ್ಲದೆ, ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಶತಕಗಳ ಸಾಧನೆ ಮಾಡಿದ್ದಾರೆ. ಏಕದಿನ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಗಳಿಸಿದ್ದಾರೆ.

ತಮ್ಮ ಪ್ರಭಾವಶಾಲಿ ಬ್ಯಾಟಿಂಗ್ ಸಾಹಸದ ಮೂಲಕ ಭಾರಿ ಗಮನ ಸೆಳೆದಿರುವ 23 ವರ್ಷದ ಆಟಗಾರ ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅವರೆಲ್ಲರೂ ಗಿಲ್​ ಅವರನ್ನು ಕೊಹ್ಲಿ ಮತ್ತು ಸಚಿನ್​ಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಈ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದು, ಗಿಲ್ ಅವರ ಬ್ಯಾಟಿಂಗ್ ವೈಖರಿಗಳು ಕೊಹ್ಲಿಗಿಂತ ತೆಂಡೂಲ್ಕರ್ ಅವರನ್ನೇ ಹೆಚ್ಚು ಹೋಲುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ODI Cricket : ಈ ಕ್ರಿಕೆಟಿಗ ಧರಿಸುವುದು ಕೊಹ್ಲಿಯ 18 ಸಂಖ್ಯೆಯ ಜೆರ್ಸಿ, ಮುರಿದಿದ್ದು ಶುಭ್​ಮನ್​ ಗಿಲ್​​ ದಾಖಲೆ!

ಶುಭ್​ಮನ್​ ಗಿಲ್ ಅವರ ತಂತ್ರವು ಸಚಿನ್ ತೆಂಡೂಲ್ಕರ್ ಅವರನ್ನು ಹೋಲುತ್ತದೆ ಎಂದು ನಾನು ಭಾವಿಸುತ್ತೇನೆ. ಸದ್ಯ ಅವರು ಹೊಂದಿರುವ ಫಾರ್ಮ್ ನೋಡಿದರೆ ಅವರನ್ನು ಔಟ್ ಮಾಡುವುದು ತುಂಬಾ ಕಷ್ಟ. ಅವರ ಆಟದಲ್ಲಿ ಯಾವುದೇ ದೌರ್ಬಲ್ಯವಿಲ್ಲ. ವಿರಾಟ್ (ಕೊಹ್ಲಿ) ಮತ್ತು ಸಚಿನ್ ಇಬ್ಬರೂ ದಂತಕಥೆಗಳು. ನಾನು ಇಬ್ಬರೊಂದಿಗೆ ಆಡಿದ್ದೇನೆ, ಆದರೆ ಕೊಹ್ಲಿಗೆ ಅವರದ್ದೇ ಆದ ದೌರ್ಬಲ್ಯಗಳಿವೆ. ತಂತ್ರ ಮತ್ತು ಮಾನಸಿಕ ದೃಢತೆಯ ವಿಷಯಕ್ಕೆ ಬಂದಾಗ ಶುಭ್​ಮನ್​ ಗಿಲ್​ ಸಚಿನ್ ಅವರಂತೆ ಶ್ರೇಷ್ಠ ಆಟಗಾರನಾಗುವ ಹಾದಿಯಲ್ಲಿದ್ದಾರೆ,” ಎಂದು ಕೈಫ್ ಸ್ಪೋರ್ಟ್ಸ್​​​ ಕ್ರೀಡಾದ ಜತೆ ಮಾತನಾಡುತ್ತಾ ನುಡಿದಿದ್ದಾರೆ.

ತೆಂಡೂಲ್ಕರ್ ಮತ್ತು ಕೊಹ್ಲಿ ಅವರ ತಂತ್ರದ ನಡುವಿನ ವ್ಯತ್ಯಾಸಗಳ ಬಗ್ಗೆ ಮಾತನಾಡಿದ ಕೈಫ್, 2014ರಲ್ಲಿ ಇಂಗ್ಲೆಂಡ್ ಪ್ರವಾಸದ ನಿರಾಶಾದಾಯಕ ಪ್ರವಾಸವನ್ನು ಉಲ್ಲೇಖಿಸಿದರು. ಇಂಗ್ಲೆಂಡ್​​ನ ಜೇಮ್ಸ್ ಆ್ಯಂಡರ್ಸನ್ ಅವರ ಮಾರಕ ಎಸೆತಗಳಿಗೆ ಪ್ರತಿರೋಧ ಒಡ್ಡಲು ಕೊಹ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕೊಹ್ಲಿಗೆ ಸಚಿನ್ ಅವರಿಗಿಂತ ಹೆಚ್ಚು ತಾಂತ್ರಿಕ ನೈಪುಣ್ಯತೆಯ ಕೊರತೆ ಇದೆ ಎಂದು ಮಾಜಿ ಆಲ್​ರೌಂಡರ್​ ಹೇಳಿದ್ದಾರೆ.

“ಸಚಿನ್ ಕೂಡ ಅತ್ಯಂತ ಬಲಿಷ್ಠ ಬ್ಯಾಟರ್​. ಸಚಿನ್ ಮತ್ತು ವಿರಾಟ್ ಅವರನ್ನು ಹೋಲಿಕೆ ಮಾಡಿದರೆ, ಸಚಿನ್​ ಅವರಿಗೆ ಬ್ಯಾಟಿಂಗ್​ನಲ್ಲಿ ದೌರ್ಬಲ್ಯಗಳು ಇರಲಿಲ್ಲ. ಪ್ರತಿಯೊಬ್ಬ ಆಟಗಾರನಿಗೂ ತಮ್ಮದೇ ತಂತ್ರಗಳನ್ನ ಬಳಸಿಕೊಳ್ಳುತ್ತಿದ್ದರು. ಆದರೆ, ವಿರಾಟ್​ ಕೊಹ್ಲಿ 2014ರಲ್ಲಿ ಇಂಗ್ಲೆಂಡ್​ ಪ್ರವಾಸಕ್ಕೆ ಹೋಗಿದ್ದ ವೇಳೆ ಆಫ್ ಸ್ಟಂಪ್ ಹೊರಗೆ ಜೇಮ್ಸ್ ಆಂಡರ್ಸನ್ ಎಸೆಯುವ ಎಸೆತಗಳನ್ನು ನಿರ್ವಹಿಸುವಲ್ಲಿ ಸೋತಿದ್ದರು. ಅವರ ಬಳಿ ಅದಕ್ಕೆ ಉತ್ತರವೇ ಇರಲಿಲ್ಲ ಎಂದು ಹೇಳಿದ್ದಾರೆ.

Exit mobile version