Site icon Vistara News

ICC Awards | ಸಿಕಂದರ್‌ ರಾಜಾಗೆ ಐಸಿಸಿ ಪ್ರಶಸ್ತಿ, ಜಿಂಬಾಬ್ವೆ ಸ್ಟಾರ್‌ ಬ್ಯಾಟರ್‌ ವಿನೂತನ ಸಾಧನೆ

icc award

ದುಬೈ : ಪಾಕಿಸ್ತಾನದ ಮೂಲದ ಜಿಂಬಾಬ್ವೆ ಕ್ರಿಕೆಟಿಗ ಸಿಕಂದರ್‌ ರಾಜಾ ಬ್ಯಾಟಿಂಗ್‌ನಲ್ಲಿ ರನ್ ಮೆಷಿನ್‌. ಇತ್ತೀಚಿಗೆ ಪ್ರವಾಸ ಹೋಗಿದ್ದ ಭಾರತ ವಿರುದ್ಧವೂ ಅವರು ಒಂದು ಶತಕ ಬಾರಿಸಿದ್ದರು. ಅದಕ್ಕಿಂತ ಮೊದಲು ನಡೆದ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯಲ್ಲೂ ಎರಡು ಶತಕ ಬಾರಿಸಿ ಮಿಂಚಿದ್ದರು. ಈ ಎಲ್ಲ ಸಾಧನೆಗಾಗಿ ಅವರು ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಯನ್ನು (ICC Awards) ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ಐಸಿಸಿಯ ಪ್ರಶಸ್ತಿ ಪಡೆದ ಜಿಂಬಾಬ್ವೆ ಬ್ಯಾಟರ್‌ ಎಂಬ ಸಾಧನೆಯನ್ನೂ ಮಾಡಿದ್ದಾರೆ.

ನ್ಯೂಜಿಲೆಂಡ್‌ನ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅವರಿಗೆ ಪೈಪೋಟಿಯೊಡ್ಡಿ ಸಿಕಂದರ್‌ ರಾಜಾ ಅವರು ತಿಂಗಳ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಜಿಂಬಾಬ್ವೆ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಆರಂಭಿಸಿದೆ. ಅದರಲ್ಲೂ ಪಾಕಿಸ್ತಾನ ಮೂಲದ ಆಟಗಾರನಾಗಿರುವ ಸಿಕಂದರ್‌ ಅವರು ಬ್ಯಾಟಿಂಗ್‌ನಲ್ಲಿ ಚಮತ್ಕಾರ ಮಾಡುತ್ತಿದ್ದಾರೆ. ಹೀಗಾಗಿ ಅವರು ಅರ್ಹವಾಗಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ಸಿಕಂದರ್‌ “ಐಸಿಸಿ ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ನಂಬಲಾಗದಷ್ಟು ಸಂತೋಷವಾಗುತ್ತಿದೆ. ಅದರಲ್ಲೂ ಈ ಪ್ರಶಸ್ತಿ ಗೆದ್ದ ಜಿಂಬಾಬ್ವೆ ಆಟಗಾರ ಎಂಬುದು ಖುಷಿಯ ವಿಚಾರ,” ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ತಮ್ಮ ಸಾಧನೆಗೆ ನೆರವಾಗಿರುವ ಸಹಾಯಕ ಸಿಬ್ಬಂದಿ, ಕೋಚಿಂಗ್‌ ವಿಭಾಗಕ್ಕೆ ಧನ್ಯವಾದರ ಹೇಳಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಯೂ ಸಿಕಂದರ್‌ಗೆ ಟ್ವೀಟ್‌ ಮೂಲಕ ಶುಭಾಶಯ ಹೇಳಿದೆ. ಈ ಪ್ರಶಸ್ತಿ ಗೆದ್ದ ಮೊದಲ ಜಿಂಬಾಬ್ವೆ ಆಟಗಾರ ಎಂಬ ಸಾಧನೆಗೆ ಹೆಮ್ಮೆಯಿದೆ ಎಂದಿದೆ.

ಇದನ್ನೂ ಓದಿ | Aus vs Zim ODI | ಕಾಂಗಾರೂಗಳ ನಾಡಲ್ಲಿ ಅವರದ್ದೇ ತಂಡವನ್ನು ಹೀನಾಯವಾಗಿ ಸೋಲಿಸಿದ ಜಿಂಬಾಬ್ವೆ

Exit mobile version