Site icon Vistara News

Badminton | ಸಿಂಧೂ ಗೆದ್ದರು, ಸೈನಾ ಮತ್ತದೇ ಕತೆ

badminton

ಸಿಂಗಾಪುರ: ಭಾರತದ ಮುಂಚೂಣಿ Badminton ತಾರೆ ಪಿ.ವಿ ಸಿಂಧೂ ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ಸ್‌ಗೇರಿದ್ದಾರೆ. ಆದರೆ, ಎರಡು ಬಾರಿಯ ಕಾಮನ್ವೆಲ್ತ್‌ ಚಿನ್ನದ ಪದಕ ವಿಜೇತ ಷಟ್ಲರ್‌ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ.

ಎಂಟರ ಘಟ್ಟದ ಪಂದ್ಯದಲ್ಲಿ ಅವರು ಚೀನಾದ ಹಾನ್‌ ಯೂ ವಿರುದ್ಧ ೧೭-೨೧, ೨೧-೧೧, ೨೧-೧೯ ಗೇಮ್‌ಗಳಿಂದ ಗೆಲುವು ಸಾಧಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಹಣಾಹಣಿಯ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಸಿಂಧೂ, ನಂತರದ ಎರಡೂ ಗೇಮ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಉಪಾಂತ್ಯಕ್ಕೆ ತಲುಪಿದರು. ಇದರೊಂದಿಗೆ ಅವರು ಕಳೆದ ಮೇ ತಿಂಗಳಲ್ಲಿ ಥಾಯ್ಲೆಂಡ್‌ ಓಪನ್‌ನ ಸೆಮಿಫೈನಲ್ಸ್‌ಗೇರಿದ ಬಳಿಕ ಮೊದಲ ಬಾರಿ ಬ್ಯಾಡ್ಮಿಂಟನ್‌ ಟೂರ್ನಿಯೊಂದರ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡರು.

ಸಿಂಧೂ ಮುಂದಿನ ಸುತ್ತಿನಲ್ಲಿ ಜಪಾನ್‌ನ ಆಟಗಾರ್ತಿ ವಿಶ್ವದ ೩೮ನೇ ಶ್ರೇಯಾಂಕದ ಸಹೇನಾ ಕವಕಮಿ ವಿರುದ್ಧ ಆಡಬೇಕಾಗಿದೆ. ಕವಕಮಿ ತಮ್ಮ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ವಿಶ್ವದ ಆರನೇ rankನ ಆಟಗಾರ್ತಿ ಪೊರ್ನ್‌ಪಾವಿ ಚೊಚುವಾಂಗ್‌ ವಿರುದ್ಧ ಗೆಲುವು ಸಾಧಿಸಿದ್ದರು. ಇವರಿಬ್ಬರ ಒಟ್ಟು ಮುಖಾಮುಖಿಗಳಲ್ಲಿ ಸಿಂಧೂ ೨-೦ ಮುನ್ನಡೆ ಹೊಂದಿದ್ದಾರೆ.

ಸೈನಾ ಅದೇ ಕತೆ

ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಅವರಿಗೆ ನಿರಾಸೆ ಎದುರಾಗಿದೆ. ಹಿಂದಿನ ಸುತ್ತಿನಲ್ಲಿ ಚೀನಾದ ಬಿಂಗ್‌ ಜಿಯಾವೊ ವಿರುದ್ಧ ಗೆಲುವು ಸಾಧಿಸಿದ್ದ ಸೈನಾ, ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ ಜಪಾನ್‌ನ ಆಯಾ ಒಹೊರಿ ವಿರುದ್ಧ ೧೩-೨೧, ೨೧-೧೫, ೨೦-೨೧ ಗೇಮ್‌ಗಳಿಂದ ಸೋಲು ಕಂಡರು. ಕೊನೇ ಗೇಮ್‌ನಲ್ಲಿ ಎರಡು ಬಾರಿ ದೊರಕಿದ ಮ್ಯಾಚ್‌ ಪಾಯಿಂಟ್‌ ಅವಕಾಶವನ್ನು ಕೈ ಚೆಲ್ಲಿದ ೩೨ ವರ್ಷದ ಆಟಗಾರ್ತಿ ಸೋತು ನಿರ್ಗಮಿಸಿದರು.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌. ಎಸ್‌ ಪ್ರಣಯ್‌ ಕೂಡ ಪದಕದಾಸೆಯನ್ನು ಕೈ ಬಿಟ್ಟಿದ್ದಾರೆ. ಜಪಾನ್‌ನ ಕೊಡೈ ನರೊಕಾ ವಿರುದ್ಧದ ಕ್ವಾರ್ಟರ್‌ ಫೈನಲ್ಸ್‌ ಪಂದ್ಯದ ಮೊದಲ ಗೇಮ್‌ ೨೧-೧೨ರಿಂದ ವಶಪಡಿಸಕೊಂಡಿರುವ ಹೊರತಾಗಿಯೂ ನಂತರದ ಎರಡು ಗೇಮ್‌ಗಳಲ್ಲಿ ೨೧-೧೪, ೨೧-೧೮ ಗೇಮ್‌ಗಳಿಂದ ಸೋಲೊಪ್ಪಿಕೊಳ್ಳುವ ಮೂಲಕ ನಿರಾಸೆ ಎದುರಿಸಿದರು.

ಇನ್ನೂ ಓದಿ | Badminton : ತಪ್ಪೇ ಮಾಡದ ಸಿಂಧೂಗೆ ದಂಡ ಹಾಕಿ ಇದೀಗ ಕ್ಷಮೆ ಕೋರಿದ ತಾಂತ್ರಿಕ ಸಮಿತಿ

Exit mobile version