ಸಿಂಗಾಪುರ: ಇಲ್ಲಿ ನಡೆಯುತ್ತಿರುವ “ಸಿಂಗಾಪುರ್ ಓಪನ್ ಸೂಪರ್ 750 ಟೂರ್ನಿ”(Singapore Open 2023)ಯಲ್ಲಿ ಭಾರತಕ್ಕೆ ಮೊದಲ ದಿನ ಮಿಶ್ರ ಫಲಿತಾಂಶ ಬಂದಿದೆ. ಪದಕ ಬರವಸೆ ಇರಿಸಿದ್ದ ಮಲೇಷ್ಯಾ ಮಾಸ್ಟರ್ ಚಾಂಪಿಯನ್ ಎಚ್.ಎಸ್. ಪ್ರಣಯ್, ಹಾಲಿ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಕೆ. ಶ್ರೀಕಾಂತ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಅರ್ಜುನ್-ಧ್ರುವ ಕಪಿಲ ಜೋಡಿ ಗೆಲುವಿನ ಶುಭಾರಂಭ ಕಂಡಿದ್ದಾರೆ.
ಮಂಗಳವಾರ ಇಲ್ಲಿ ಆರಂಭಗೊಂಡ ಈ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಹಾಲಿ ಚಾಂಪಿಯನ್ ಆಗಿದ್ದ ಪಿ.ವಿ ಸಿಂಧು ಅವರು ವಿಶ್ವದ ನಂ.1 ಆಟಗಾರ್ತಿ, ಜಪಾನ್‌ನ ಅಕಾನೆ ಯಮಾಗುಚಿ ವಿರುದ್ಧ ತೀವ್ರ ಹೋರಾಟ ನಡೆಸಿದರೂ 21-18, 19-21, 17-21 ಗೇಮ್ಗಳಿಂದ ಪರಾಭವಗೊಂಡರು. ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ ಸಿಂಧು ಆ ಬಳಿಕದ ಎರಡು ಗೇಮ್ಗಲ್ಲಿ ಪ್ರಬಲ ಪ್ರತಿರೋಧ ನೀಡಿದರೂ ಅಂತಿಮ ಹಂತದಲ್ಲಿ ಮಾಡಿದ ಕೆಲ ತಪ್ಪುಗಳಿಂದ ಸೋಲು ಕಾಣಬೇಕಾಯಿತು. ಉಭಯ ಆಟಗಾರ್ತಿಯರ ಈ ಹೋರಾಟ ಒಂದು ಗಂಟೆಗಳ ಕಾಲ ಸಾಗಿತು.
ದಿನದ ಮತ್ತೊಂದು ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಮತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಥಾಯ್ಲೆಂಡ್‌ನ ರಚನೋಕ್ ಇಂತಾನನ್ ವಿರುದ್ಧ 13-21, 15-21 ನೇರ ಗೇಮ್ಗಳ ಸೋಲುಂಡರು.
ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಎಚ್.ಎಸ್. ಪ್ರಣಯ್ ಅವರು ಜಪಾನ್‌ನ ಮೂರನೇ ಶ್ರೇಯಾಂಕಿತ ಆಟಗಾರ ಕೋಡೈ ನರವೋಕ ಎದುರು ನೇರ ಗೇಮ್ಗಳ ಸೋಲು ಕಂಡು ನಿರಾಸೆ ಅನುಭವಿಸಿದರು. ನರವೋಕ ಗೆಲುವಿನ ಅಂತರ 15-21 19-21.
ಇದನ್ನೂ ಓದಿ Thailand Open: ಸೈನಾ, ಕಿರಣ್ ಜಾರ್ಜ್ ಮುನ್ನಡೆ; ಸಿಂಧು, ಶ್ರೀಕಾಂತ್, ಪ್ರಣೀತ್ಗೆ ಸೋಲು
ಗೇಲುವು ದಾಖಲಿಸಿದ ಕೆ. ಶ್ರೀಕಾಂತ್
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆ. ಶ್ರೀಕಾಂತ್ ಅವರು ಗೆಲುವು ದಾಖಲಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಅವರು ಥಾಯ್ಲೆಂಡ್‌ನ ಕಾಂತಾ ಫೊನ್ ವಾಂಗ್‌ಶೆರೋನ್ ವಿರುದ್ಧ 43 ನಿಮಿಷಗಳ ಕಾಲ ಹೋರಾಟ ನಡೆಸಿ 21-15, 21-19 ಅಂತರದಿಂದ ಮೇಲುಗೈ ಸಾಧಿಸಿದರು.
ಪುರುಷರ ಡಬಲ್ಸ್‌ನಲ್ಲಿ ಅರ್ಜುನ್-ಧ್ರುವ ಕಪಿಲ ಜೋಡಿ ಫ್ರಾನ್ಸ್ನ ರೋನಾನ್ ಲಾಬರ್-ಲ್ಯೂಕಾಸ್ ಕಾರ್ವೀ ಜೋಡಿಯನ್ನು 21-16, 21-15 ಅಂತರದಿಂದ ಹಿಮ್ಮೆಟ್ಟಿಸಿದರು.