Site icon Vistara News

Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

Singapore Open

Singapore Open: PV Sindhu crashes out after losing to Carolina Marin in thriller

ಸಿಂಗಾಪುರ: ಮಾಜಿ ಚಾಂಪಿಯನ್ ಪಿ.ವಿ.ಸಿಂಧು(PV Sindhu) ಅವರು ಸಿಂಗಾಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್(Singapore Open) ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸಿಂಧು ಸ್ಪೇನ್‌ನ ಶಟ್ಲರ್‌ ಕೆರೊಲಿನಾ ಮರಿನ್‌(Carolina Marin) ವಿರುದ್ಧ 21-11, 11-21, 20-22 ಅಂತರದಿಂದ ಸೋಲು ಕಂಡರು.

ತೀವ್ರ ಪೈಪೋಟಿಯಿಂದ ನಡೆದ ಮೂರು ಗೇಮ್​ಗಳ ಹೋರಾಟದಲ್ಲಿ ಮೊದಲ ಗೇಮ್​ ಅನ್ನು ಸಿಂಧು ಗೆದ್ದು ಮುನ್ನಡೆ ಸಾಧಿಸಿದರು. ಆದರೆ ಆ ಬಳಿಕದ 2 ಗೇಮ್​ಗಳನ್ನು ಸೋತು ನಿರಾಸೆ ಎದುರಿಸಿದರು. ಅಂತಿಮ ಗೇಮ್​ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಅಂಕಕ್ಕಾಗಿ ಉಭಯ ಆಟಗಾರ್ತಿಯರು ತಮ್ಮ ಉತ್ಕೃಷ್ಟ ಮಟ್ಟದ ಆಟವಾಡಿದರು. ಆದರೆ ಅದೃಷ್ಟ ಮರಿನ್​ಗೆ ಒಲಿಯಿತು. ಕೇವಲ 2 ಅಂಕದ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಇದು ಸ್ಪೇನ್ ಆಟಗಾರ್ತಿಯ ವಿರುದ್ಧ ಸಿಂಧುಗೆ ಎದುರಾದ ಸತತ ಆರನೇ ಸೋಲಾಗಿದೆ. ಒಟ್ಟಾರೆಯಾಗಿ ಸಿಂಧು ವಿರುದ್ಧ 12-5ರ ಗೆಲುವಿನ ದಾಖಲೆ ಹೊಂದಿದ್ದಾರೆ.‌

ಕಳೆದ ವಾರ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸಿಂಧು ದ್ವಿತೀಯ ಸ್ಥಾನಿಯಾಗಿದ್ದರು. ಫೈನಲ್​ನಲ್ಲಿ ಚೀನಾದ ವಾಂಗ್‌ ಝಿ ಯಿ ವಿರುದ್ಧ 21-16, 5-21, 21-16 ಗೇಮ್​ಗಳ ಅಂತರದಿಂದ ಸೋಲು ಕಂಡಿದ್ದರು. ಇದೀಗ ಸಿಂಗಾಪುರ ಓಪನ್​ನಲ್ಲಿ 2ನೇ ಸುತ್ತಿಗೆ ಆಟ ಮುಗಿಸಿದರು.

ಇದನ್ನೂ ಓದಿ Malaysia Masters Final: ಮಲೇಷ್ಯಾ ಮಾಸ್ಟರ್ಸ್ ಫೈನಲ್​ನಲ್ಲಿ ಸೋಲು ಕಂಡ ಪಿ.ವಿ.ಸಿಂಧು

ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು 21-12, 22-20 ರಿಂದ ವಿಶ್ವದ 21ನೇ ಕ್ರಮಾಂಕದ ಆಟಗಾರ್ತಿ ಲಿನೆ ಹೊಜ್‌ರಮಾಕ್‌ ಕಾಯರ್ಸ್‌ಫೆಲ್ಟ್‌ ಅವರನ್ನು ಸೋಲಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದರು. ಸಿಂಧು 2022ರಲ್ಲಿ ಸ್ವಿಸ್ ಓಪನ್, ಸಿಂಗಾಪೂರ ಓಪನ್, ಸೆಯ್ಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಗೆದ್ದಿದ್ದರು. ಆ ಬಳಿಕ ಯಾವುದೇ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಕಳೆದ ವರ್ಷ ಸ್ಪೇನ್ ಮಾಸ್ಟರ್ಸ್ ಫೈನಲ್‌ಗೇರಿ ಸೋತಿದ್ದರು. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಮಲೇಷ್ಯಾ ಮಾಸ್ಟರ್ಸ್ ಮೂಲಕ 2 ವರ್ಷಗಳ ಬಳಿಕ ಪ್ರಶಸ್ತಿಯೊಂದನ್ನು ಗೆಲ್ಲುವ ಇರಾದೆಯಲ್ಲಿದ್ದ ಸಿಂಧುಗೆ ಫೈನಲ್​ನಲ್ಲಿ ವಾಂಗ್‌ ಝಿ ಅಡಗಾಲಿಕ್ಕಿದ್ದರು.

ಇದೇ ಜುಲೈ 26ರಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ಆರಂಭಕ್ಕೂ ಮುನ್ನ ಸಿಂಧು ಅವರು ಸೋಲು ಕಂಡಿದ್ದು. ಅವರ ಮೇಲಿನ ಪದಕ ಭರವಸೆಯನ್ನು ಕುಂಠಿತಗೊಳ್ಳುವಂತೆ ಮಾಡಿದೆ. ಸತತವಾಗಿ 2 ಒಲಿಂಪಿಕ್ಸ್​ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಮಹಿಳಾ ಕ್ರೀಡಪಟು ಎನಿಸಿಕೊಂಡಿರುವ ಸಿಂಧು ಇತ್ತೀಚೆಗೆ ಎಲ್ಲ ಟೂರ್ನಿಯಲ್ಲೂ ವಿಫಲರಾಗಿದ್ದಾರೆ. ಸಿಂಧು ಪ್ಯಾರಿಸ್‌ಗೆ ತೆರಳುವ ಮೊದಲು ಜರ್ಮನಿಯ ಸಾರ್ಬ್ರುಕೆನ್‌ನಲ್ಲಿರುವ ಹರ್ಮನ್-ನ್ಯೂಬರ್ಗರ್ ಸ್ಪೋರ್ಟ್‌ ಕ್ಲಬ್​ನಲ್ಲಿ ತರಬೇತಿ ಪಡೆಯಲಿದ್ದಾರೆ.

Exit mobile version