ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (INDvsBAN) ಮೊದಲ ಪಂದ್ಯದಲ್ಲಿ ಭಾರತ ತಂಡ ಮುನ್ನಡೆ ಪಡೆಯುವ ಹಾದಿಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ೪೦೪ ರನ್ ಬಾರಿಸಿರುವ ಟೀಮ್ ಇಂಡಿಯಾ, ಪ್ರತಿಯಾಗಿ ೧೩೩ ರನ್‌ಗಳಿಗೆ ಆತಿಥೇಯ ತಂಡದ ೮ ವಿಕೆಟ್‌ಗಳನ್ನು ಉರುಳಿಸಿದೆ. ಇನ್ನೂ ಮೂರು ದಿನಗಳ ಪಂದ್ಯ ಬಾಕಿ ಉಳಿದಿದ್ದು ಭಾರತಕ್ಕೆ ಪೂರಕವಾಗಿ ಫಲಿತಾಶ ಪ್ರಕಟಕೊಳ್ಳುವ ಸಾಧ್ಯತೆಗಳಿವೆ. ಏತನ್ಮಧ್ಯೆ, ದೊಡ್ಡ ಗುರಿಯನ್ನು ಬೆನ್ನಟ್ಟಲು ಮುಂದಾದ ಬಾಂಗ್ಲಾ ಪಡೆಗೆ ಮಾರಕವಾಗಿ ಕಾಡಿದ್ದು ವೇಗಿ ಮೊಹಮ್ಮದ್ ಸಿರಾಜ್. ಅವರು ೧೪ ರನ್‌ಗಳನ್ನು ನೀಡಿ ಆರಂಭಿಕರಿಬ್ಬರು ಸೇರಿ ಪ್ರಮುಖ ಮೂವರನ್ನು ಔಟ್ ಮಾಡಿದ್ದಾರೆ. ಇವೆಲ್ಲದರ ನಡುವೆ ಸಿರಾಜ್ ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇದು ಎರಡನೇ ದಿನದ ಹೈಲೈಟ್ ಕೂಡ ಆಯಿತು.
ಇನಿಂಗ್ಸ್‌ನ ೧೪ನೇ ಓವರ್ ಎಸೆದ ಮೊಹಮ್ಮದ್ ಸಿರಾಜ್ ಲಿಟನ್ ದಾಸ್ ಬಳಿ ತೆರಳಿ ಏನೋ ಹೇಳಿ ಹೋಗುತ್ತಾರೆ. ಲಿಟನ್, ಸರಿಯಾಗಿ ಕೇಳಿಸಿಕೊಂಡಿಲ್ಲ ಎಂಬುದಾಗಿ ಸನ್ನೆ ಮಾಡುತ್ತಾ ಸಿರಾಜ್ ಬಳಿ ಬರುತ್ತಾರೆ. ಇದರಿಂದಾಗಿ ದೊಡ್ಡ ಮಾತಿನ ಚಕಮಕಿ ನಡೆಯುವ ಸಂದರ್ಭ ಉಂಟಾಯಿತು. ತಕ್ಷಣ ಫೀಲ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುತ್ತಾರೆ. ಮುಂದಿನ ಎಸೆತದಲ್ಲಿಯೇ ಲಿಟನ್ ದಾಸ್ ಕ್ಲೀನ್ ಬೌಲ್ಡ್ ಆಗುತ್ತದೆ. ತಕ್ಷಣ ಸೇಡು ತೀರಿಸಿಕೊಂಡೆ ಎಂಬ ಖುಷಿಯಲ್ಲಿ ಬಾಯಿಗೆ ಬೆರಳಿಟ್ಟು ಸುಮ್ಮನಿರು ಎಂಬಂತೆ ಸಿರಾಜ್ ಸನ್ನೆ ಮಾಡುತ್ತಾರೆ. ಸಿರಾಜ್‌ಗೆ ವಿರಾಟ್ ಕೊಹ್ಲಿಯೂ ಸಾಥ್ ಕೊಡುತ್ತಾರೆ.
ಪಂದ್ಯದ ಮುಕ್ತಾಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಗೆ ನೀವು ಲಿಟನ್ ದಾಸ್‌ಗೆ ಕೋಪ ಬರಿಸುವಂತೆ ಯಾವ ಮಾತು ಹೇಳಿದ್ದು ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಸಿರಾಜ್, ನಾನು ಏನೂ ಹೇಳಿಲ್ಲ. ಹತ್ತಿರ ಹೋಗಿ, ಇದು ಟಿ೨೦ ಅಲ್ಲ. ಟೆಸ್ಟ್ ಎಂದಷ್ಟೇ ಹೇಳಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ.
ಕಳೆದ ತಿಂಗಳು ಮುಕ್ತಾಯಗೊಂಡ ಟಿ20 ವಿಶ್ವ ಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಲಿಟನ್ ದಾಸ್ ಭಾರತ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಿಗೆ 60 ರನ್ ಬಾರಿಸುತ್ತಾರೆ. ಈ ಮೂಲಕ ಭಾರತ ತಂಡಕ್ಕೆ ಸೋಲಿನ ಭಯ ಸೃಷ್ಟಿಸಿದ್ದರು. ಅದೇ ಉದ್ದೇಶ ಇಟ್ಟುಕೊಂಡು ಸಿರಾಜ್ ಲಿಟನ್ ಅವರನ್ನು ಕಿಚಾಯಿಸಿದ್ದರು.
ಇದನ್ನೂ ಓದಿ | IND VS BAN | ಕೆಣಕಿದ ಲಿಟನ್ ದಾಸ್‌ಗೆ ಮರು ಎಸೆತದಲ್ಲೇ ಪೆವಿಲಿಯನ್ ದಾರಿ ತೋರಿಸಿದ ಸಿರಾಜ್!