ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ 2023ರಿಂದ ಆರಂಭವಾಗಲಿರುವ ಸಿಎಸ್ಎ ಕ್ರಿಕೆಟ್ ಟಿ20 ಲೀಗ್ನ ತಂಡಗಳ ಖರೀದಿಗೆ ಬಿಡ್ ಆರಂಭಗೊಂಡಿದೆ. ಅಚ್ಚರಿಯೆಂದರೆ IPL ತಂಡಗಳನ್ನು ಖರೀದಿಸಿರುವ ಫ್ರಾಂಚೈಸಿಗಳೇ ಅಲ್ಲಿಯೂ ತಂಡಗಳನ್ನು ಖರೀದಿ ಮಾಡಲು ಮುಂದಾಗಿವೆ ಎಂದು ಹೇಳಲಾಗುತ್ತಿದೆ. ವರದಿ ಸತ್ಯವಾಗಿದ್ದರೆ ಅದು ಮಿನಿ ಐಪಿಎಲ್ನಂತೆ ಭಾಸವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಆರು ತಂಡಗಳನ್ನು ಹೊಂದಿರುವ ಲೀಗ್ ಇದಾಗಿದ್ದು, ಭಾರತದಲ್ಲಿ ಐಪಿಎಲ್ ಆರಂಭದಲ್ಲಿ ಯೋಜನೆಯ ಭಾಗವಾಗಿದ್ದ ಸುಂದರ್ ರಮಣ್ ಅವರು ಈ ಯೋಜನೆಯಲ್ಲೂ ಕೈ ಜೋಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್ ಅವರು ಲೀಗ್ ಕಮಿಷನರ್ ಆಗಿ ನೇಮಕೊಂಡಿದ್ದಾರೆ. ಈ ಇಬ್ಬರು ಭಾರತದ ಫ್ರಾಂಚೈಸಿ ಮಾಲೀಕರನ್ನು ಭೇಟಿ ಮಾಡಿ ಬಿಡ್ಗೆ ಆಹ್ವಾನ ಸಲ್ಲಿಸಿದ್ದಾರೆ. ಐಪಿಎಲ್ ಫ್ರಾಂಚೈಸಿ ಮಾಲೀಕರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಯಾವೆಲ್ಲ ತಂಡಗಳು?
ಕೇಪ್ ಟೌನ್ ತಂಡವನ್ನು ಮುಂಬಯಿ ಇಂಡಿಯನ್ಸ್ ತಂಡ ಖರೀದಿ ಮಾಡಿದರೆ, ಜೊಹಾನ್ಸ್ಬರ್ಗ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಲಿದೆ. ಡರ್ಬನ್ ತಂಡವನ್ನು ಲಖನೌ ಸೂಪರ್ ಜಯಂಟ್ಸ್ ತಂಡ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಪೋರ್ಟ್ ಎಲಿಜಬೆತ್ ತಂಡವನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ಪ್ರೆಟೊರಿಯಾ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಗೂ ಪಾರ್ಲ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರು ಖರೀದಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರೆಲ್ಲರೂ ಅಲ್ಲಿ ತಂಡಗಳನ್ನು ಖರೀದಿ ಮಾಡಿದರೆ ಮಿನಿ ಐಪಿಎಲ್ ರೀತಿಯಂತೆ ಆಗಬಹುದು ಎಂದು ಹೇಳಲಾಗುತ್ತಿದೆ. ಬುಧವಾರದಿಂದ ಶುಕ್ರವಾರದ ಒಳಗೆ ಬಿಡ್ ಪ್ರಕ್ರಿಯೆ ಕುರಿತು ಮಾಹಿತಿ ದೊರೆಯಲಿದೆ.
ಭಾರತೀಯ ಫ್ರಾಂಚೈಸಿಗಳಿಗೆ ಯಾಕೆ ಆಸಕ್ತಿ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 3.30 ಗಂಟೆಗಳ ಕಾಲಮಾನ ವ್ಯತ್ಯಾಸವಿದೆ. ಹೀಗಾಗಿ ಇಲ್ಲಿನ ಲೀಗ್ಗಳಲ್ಲಿ ತಂಡಗಳನ್ನು ಖರೀದಿ ಮಾಡಿದರೆ ಭಾರತದಲ್ಲೂ ವೀಕ್ಷಕರು ದೊರೆಯುವ ಸಾಧ್ಯತೆಗಳಿವೆ. ಹೀಗಾಗಿ ಅಲ್ಲಿ ಹೂಡಿಕೆ ಮಾಡಲು ಮುಂದಾಗಿವೆ ಎನ್ನಲಾಗಿದೆ.
ಎಂದು ಅರಂಭ
2023ರ ಜನವರಿ ಹಾಗೂ ಫೆಬ್ರವರಿಯಲ್ಲಿ ದಕ್ಷಿಣ ಕ್ರಿಕೆಟ್ ಲೀಗ್ ನಡೆಯುವುದು ಖಾತರಿ. ಅದಕ್ಕಾಗಿ ಆ ವೇಳೆ ನಡೆಯಬೇಕಾಗಿದ್ದ ಆಸ್ಟ್ರೇಲಿಯಾ ಪ್ರವಾಸದ ಸರಣಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ರದ್ದು ಮಾಡಿದೆ.
ಇದನ್ನೂ ಓದಿ | Indian Premier League l ಎರಡೂವರೆ ತಿಂಗಳು ಐಪಿಎಲ್ ನಡೆಯಲು ಬಿಡೆವು ಎಂದ ರಾಜಾ