ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ, ಅಂತಿಮ ಪಂದ್ಯವನ್ನು(SL vs IND 3rd T20I) ಆಡಲು ಸಜ್ಜಾಗಿದೆ. ಇತ್ತಂಡಗಳ ಈ ಅಂತಿಮ ಮುಖಾಮುಖಿ ಇಂದು(ಮಂಗಳವಾರ) ನಡೆಯಲಿದೆ. ಈ ಪಂದ್ಯವನ್ನು ಗೆದ್ದು ವೈಟ್‌ವಾಶ್ ಸಾಧಿಸುವುದು ಭಾರತದ ಗುರಿ.
ಭಾನುವಾರ ನಡೆದಿದ್ದ ದ್ವಿತೀಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದೀಗ ಇಂದು ನಡೆಯುವ ಪಂದ್ಯಕ್ಕೂ ಭಾರೀ ಮಳೆ ಮುನ್ಸೂಚನೆ ಇದೆ. ಕಳೆದ ಮಳೆಪೀಡಿತ ದ್ವಿತೀಯ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದು ಸರಣಿ ಗೆಲುವು ಸಾಧಿಸಿತ್ತು. ಯುವ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿ ಗೋಚರಿಸಿದೆ. ಆದರೆ, ಸಂಜು ಸ್ಯಾಮ್ಸನ್ ತಮಗೆ ಸಿಕ್ಕ ಅವಕಾಶವನ್ನು ಮತ್ತೆ ಕೈಚೆಲ್ಲಿದ್ದಾರೆ. ಕಳೆದ ಪಂದ್ಯಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದ್ದರು. ಒಂದೊಮ್ಮೆ ಅಂತಿಮ ಪಂದ್ಯದಲ್ಲಿಯೂ ಆಡುವ ಅವಕಾಶ ಸಿಕ್ಕಿ ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರೆ ಮತ್ತೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟಸಾಧ್ಯ.
ಇದನ್ನೂ ಓದಿ Paris Olympics: ಮನು ಭಾಕರ್-ಸರಬ್ಜೊತ್ ಸಿಂಗ್ ಕಂಚಿನ ನಿರೀಕ್ಷೆ; ಭಾರತದ ಇಂದಿನ ಸ್ಪರ್ಧೆಗಳ ವಿವರ ಹೀಗಿದೆ
ನೂತನ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಹೊಡಿಬಡಿ ಶೈಲಿಯಲ್ಲೇ ಬ್ಯಾಟಿಂಗ್ ನಡೆಸುತ್ತಾ ತಂಡಕ್ಕೆ ನೆರವಾಗುತ್ತಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಉಳಿದೆಲ್ಲ ಬೌಲರ್ಗಳು ಸಂಘಟಿತ ಪ್ರದರ್ಶನ ತೋರುತ್ತಿದ್ದಾರೆ. ಸಿರಾಜ್ ಆಡಿದ 2 ಪಂದ್ಯಗಳಲ್ಲಿಯೂ ಸರಿಯಾಗಿ ದಂಡಿಸಿಕೊಂಡಿದ್ದರು. ಹೀಗಾಗಿ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಖಲೀಲ್ ಅಹ್ಮದ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಏಕದಿನ ಸರಣಿ ಆಡುವ ನಿಟ್ಟಿನಲ್ಲಿ ಗಿಲ್ಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಬಹುದು. ಕುತ್ತಿಗೆ ನೋವಿಗೊಳಗಾಗಿದ್ದ ಕಾರಣ ಗಿಲ್ ದ್ವಿತೀಯ ಪಂದ್ಯದಿಂದ ಹೊರಗುಳಿದಿದ್ದರು.
ಸಂಭಾವ್ಯ ತಂಡಗಳು
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೀ), ಕುಸಲ್ ಪೆರೇರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕ (ನಾಯಕ), ದಸುನ್ ಶನಕ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಮತೀಶ ಪತಿರಣ, ಅಸಿತ ಫೆರ್ನಾಂಡೊ.
ಭಾರತ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಭ್ ಪಂತ್ (ವಿಕೀ), ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್.
ಅಭ್ಯಾಸ ಆರಂಭಿಸಿದ ರೋಹಿತ್, ಕೊಹ್ಲಿ
ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಆಗಸ್ಟ್ 2ರಂದು ಮೊದಲ ಪಂದ್ಯ ನಡೆಯಲಿದೆ. ಈ ಸರಣಿಯನ್ನಾಡಲು ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ,ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿ ಕೆಲ ಆಟಗಾರರು ಈಗಾಗಲೇ ಲಂಕಾ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಭಾರತದ ಏಕದಿನ ತಂಡದ ಸದಸ್ಯರು ಭಾನುವಾರ ಕೊಲಂಬೊಗೆ ಆಗಮಿಸಿದ್ದರು.