ಹ್ಯಾಮಿಲ್ಟನ್: ಪ್ರವಾಸಿ ಶ್ರೀಲಂಕಾ(SL VS NZ) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದ ಕಿವೀಸ್ ಸೆರಣಿ ಗೆಲುವು ದಾಖಲಿಸಿದೆ. ದ್ವಿತೀಯ ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಸರಣಿ ಸೋಲು ಅನುಭವಿಸಿದ ಕಾರಣ ಶ್ರೀಲಂಕಾ ತಂಡ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯುವ ಅವಕಾಶ ಕಳೆದುಕೊಂಡಿತು. ಜೂನ್‌ನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಗಿದೆ.
ಶುಕ್ರವಾರ ಹ್ಯಾಮಿಲ್ಟನ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 41.3 ಓವರ್‌ಗಳಲ್ಲಿ ಕೇವಲ 157 ರನ್‌ಗಳಿಗೆ ಸರ್ವಪತನ ಕಂಡಿತು. ಸಣ್ಣ ಮೊತ್ತದ ಗುರಿ ಪಡೆದ ಆತಿಥೇಯ ನ್ಯೂಜಿಲ್ಯಾಂಡ್ 32.5 ಓವರ್‌ಗಳಲ್ಲಿ 4 ವಿಕೆಟ್‌ಗೆ 159 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡದ ಪರ ವಿಲ್ ಯಂಗ್ (86*) ಅವರು ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ಕಿವೀಸ್ ಆರಂಭ ಉತ್ತಮವಾಗಿರಲಿಲ್ಲ. 59 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿತ್ತು. ಆದರೆ ವಿಲ್ ಯಂಗ್ ಮತ್ತು ಹೆನ್ರಿ ನಿಕೊಲ್ಸ್ (44*) ಮುರಿಯದ ಐದನೇ ವಿಕೆಟ್‌ಗೆ 100 ರನ್ ಸೇರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಶ್ರೀಲಂಕಾ ಪರ ಪಥುಮ್ ನಿಸಾಂಕ (57) ಹೊರತುಪಡಿಸಿ ಇತರರು ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಕಿವೀಸ್ ಪರ ಮ್ಯಾಟ್ ಹೆನ್ರಿ, ಡೆರಿಲ್ ಮಿಚೆಲ್ ಮತ್ತು ಹೆನ್ರಿ ಶಿಪ್ಲಿ ತಲಾ ಮೂರು ವಿಕೆಟ್ ಉರುಳಿಸಿದರು.
ಇದನ್ನೂ ಓದಿ IPL 2023: ಬೆಂಗಳೂರಲ್ಲಿ ಐಪಿಎಲ್ ಮ್ಯಾಚ್; ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 41.3 ಓವರ್‌ಗಳಲ್ಲಿ 157 (ಪಥುಮ್ ನಿಸಾಂಕ 57, ದಸುನ್ ಶನಕ 31, ಚಮಿಕ ಕರುಣರತ್ನೆ 24, ಮ್ಯಾಟ್ ಹೆನ್ರಿ 14ಕ್ಕೆ 3, ಹೆನ್ರಿ ಶಿಪ್ಲಿ 32ಕ್ಕೆ 3, ಡೆರಿಲ್ ಮಿಚೆಲ್ 32ಕ್ಕೆ 3)
ನ್ಯೂಜಿಲ್ಯಾಂಡ್: 32.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 (ವಿಲ್ ಯಂಗ್ ಅಜೇಯ 86, ಹೆನ್ರಿ ನಿಕೊಲ್ಸ್ ಅಜೇಯ 44, ಲಾಹಿರು ಕುಮಾರ 39ಕ್ಕೆ 2).