ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿರುವ ಕುಸ್ತಿಪಟುಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾತನಾಡಿರುವ ಬ್ರಿಜ್ ಭೂಷಣ್, ನನ್ನ ಬಂಧನಕ್ಕೆ ಒತ್ತಾಯಿಸಿ ವಿನೇಶ್ ಫೋಗಟ್ ಮತ್ತು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಅನಗತ್ಯವಾಗಿ ದೇಶದ ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿಯ ವಿರುದ್ಧ ಘೋಷಣೆ ಕೂಗುವುದು ಸರಿಯಲ್ಲ. ಅವರಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಹೀಗಿರುವಾಗ ಗಣ್ಯ ವ್ಯಕ್ತಿಗಳ ಹೆಸರು ಬಳಸಿದ ಪ್ರತಿಭಟನಾಕಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಈ ಚಳವಳಿಯು ದೆಹಲಿಯಿಂದ ಪಂಜಾಬ್ ಮತ್ತು ಖಲಿಸ್ತಾನ್ ಕಡೆಗೆ ಚಲಿಸುತ್ತಿದೆ. ಬಜರಂಗ್ ಪುನಿಯಾ ಬೇರೊಬ್ಬರ ಪರವಾಗಿ ಮಾತನಾಡುತ್ತಿದ್ದಾರೆ. ಯಾವುದೇ ಸಾಕ್ಷಾಧಾರ ಇಲ್ಲದೆ ನಡೆಸುತ್ತಿರುವ ಈ ಪ್ರತಿಭಟನೆ ಬಗ್ಗೆ ದಿಲ್ಲಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ಅಯೋಧ್ಯೆ ರ‍್ಯಾಲಿಗೆ ಬೆಂಬಲ ಇಲ್ಲ; ಬಿಜೆಪಿ ಘಟಕ
ಜೂನ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ದಾರ್ಶನಿಕರ ರ‍್ಯಾಲಿ ಕುರಿತು ಮಾತನಾಡಿದ ಅವರು ಈ ರ‍್ಯಾಲಿಯಲ್ಲಿ 11 ಲಕ್ಷ ಭಕ್ತರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ಈ ರ‍್ಯಾಲಿಗೆ ಅಯೋಧ್ಯೆ ಬಿಜೆಪಿ ಘಟಕ ಯಾವುದೇ ಬೆಂಬಲವಿಲ್ಲ ಎಂದು ಇದರ ಮುಖ್ಯಸ್ಥರು ಈಗಾಗಲೇ ಹೇಳಿದ್ದಾರೆ. ಬ್ರಿಜ್ ಭೂಷಣ್ ಅವರು ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಜನ ಚೇತನ ಮಹಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾಧುಗಳು, ಕಾನೂನು ತಜ್ಞರು ಹಾಗೂ ಶಿಕ್ಷಣ ತಜ್ಞರನ್ನು ಆಹ್ವಾನಿಸಲಾಗಿದೆ.