ಅಹಮದಾಬಾದ್: ಭಾರತ ವಿರುದ್ಧದ ಟೆಸ್ಟ್ ಸರಣಿಯ (INDvsAUS) ನಾಲ್ಕನೇ ಪಂದ್ಯದ ವೇಳೆಯೂ ಆಸ್ಟ್ರೇಲಿಯಾ ತಂಡದ ಕಾಯಂ ನಾಯಕ ಪ್ಯಾಟ್ ಕಮಿನ್ಸ್ ವಾಪಸಾಗುವುದಿಲ್ಲ. ಹೀಗಾಗಿ ಸ್ಟೀವ್ ಸ್ಮಿತ್ ನಾಯಕಗಾಗಿ ಮುಂದುವರಿಯಲಿದ್ದಾರೆ. ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಸೋಲು ಕಂಡಿತ್ತು. ಆದರೆ, ಸ್ಮಿತ್ ನೇತೃತ್ವದಲ್ಲಿ ಪ್ರವಾಸಿ ತಂಡಕ್ಕೆ 9 ವಿಕೆಟ್ ಭರ್ಜರಿ ಜಯ ದೊರಕಿತ್ತು. ನಾಯಕತ್ವದಲ್ಲಿ ಹೆಚ್ಚುಗಾರಿಕೆಯನ್ನು ಹೊಂದಿರುವ ಸ್ಟೀವ್ ಸ್ಮಿತ್ ಭಾರತ ತಂಡಕ್ಕೆ ಸವಾಲೆಸೆಯುವುದು ಖಾತರಿ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಅಂತಿಮ ಪಂದ್ಯ ಮಾರ್ಚ್ 9ರಂದು ಆರಂಭಗೊಳ್ಳಲಿದೆ. ಮೂರು ಪಂದ್ಯಗಳು ಮುಕ್ತಾಯಗೊಂಡಿರುವ ಬಳಿಕ ಭಾರತ ತಂಡ 2-1ರ ಮುನ್ನಡೆಯಲ್ಲಿದೆ. ಹೀಗಾಗಿ ಸರಣಿಯನ್ನು ವಶಪಡಿಸಿಕೊಳ್ಳುವುದಕ್ಕೆ ಕೊನೇ ಪಂದ್ಯದಲ್ಲಿ ಡ್ರಾ ಅಥವಾ ಗೆಲುವು ಸಾಧಿಸಬೇಕು.
ಮಾರ್ಚ್ 4ರಂದು ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಕಮಿನ್ಸ್ ಬರುವ ಸಾಧ್ಯತೆಗಳು ಇಲ್ಲ ಎಂಬ ಸೂಚನೆ ನೀಡಿದ್ದಾರೆ. ಕಮಿನ್ಸ್ ಇನ್ನೂ ಆಸ್ಟ್ರೇಲಿಯಾದಿಂದ ಹೊರಟಿಲ್ಲ. ಆದರೆ, ಭಾರತದಲ್ಲಿರುವ ತಂಡದ ಜತೆ ಅವರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : INDvsAUS : ನನ್ನ ಮತ್ತು ವಿರಾಟ್ ಕೊಹ್ಲಿಯ ನಡುವಿನ ಹೋಲಿಕೆಗೆ ಅರ್ಥವಿಲ್ಲ; ಸ್ಟೀವ್ ಸ್ಮಿತ್
ಕಮಿನ್ಸ್ ಅವರ ಕುಟುಂಬ ಸಮಸ್ಯೆಯಲ್ಲಿದೆ. ಹೀಗಾಗಿ ಅವರು ಅಲ್ಲೇ ಉಳಿದುಕೊಳ್ಳಬೇಕಾಗಿದೆ. ಆದರೂ ಅವರ ಜತೆ ನಿತ್ಯವೂ ಸಂಪರ್ಕದಲ್ಲಿದ್ದೇವೆ. ಹೀಗಾಗಿ ಅವರ ಆಗಮನ ನಿರೀಕ್ಷೆಯಲ್ಲಿದ್ದೇವೆ ಎಂದು ಡೊನಾಲ್ಡ್ ಹೇಳಿದ್ದಾರೆ.