ಸೌತಾಂಪ್ಟನ್: ಟೀಮ್ ಇಂಡಿಯಾದ ಸ್ಟಾರ್ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಅವರು ಮಹಿಳಾ “ದಿ ಹಂಡ್ರೆಡ್” ಕ್ರಿಕೆಟ್(the hundred women) ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಶುಕ್ರವಾರ ರಾತ್ರಿ ಇಲ್ಲಿನ ಸೌತಾಂಪ್ಟನ್‌ನ ರೋಸ್ ಬೌಲ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ವಾಲ್ಷ್ ಫೈರ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಂಧಾನ ಕೇವಲ 42 ಎಸೆತಗಳಲ್ಲಿ ಭರ್ಜರಿ 11 ಬೌಂಡರಿ ಬಾರಿಸಿ ಅಜೇಯ 70 ರನ್ ಸಿಡಿಸಿದರು. ಇದೇ ವೇಳೆ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ 500 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಮಹಿಳಾ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ 500 ರನ್ಗಳ ಗಡಿ ದಾಟಿದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು.
ಇದನ್ನೂ ಓದಿ Smriti Mandhana: ಆರ್ಸಿಬಿ ತಂಡಕ್ಕೆ ಸ್ಮೃತಿ ಮಂಧಾನಾ ನಾಯಕಿ
ಸತತ ಮೂರನೇ ಆವೃತ್ತಿಯಲ್ಲಿ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಂಧಾನ ಈ ವರೆಗೆ 17 ಪಂದ್ಯಗಳನ್ನು ಆಡಿದ್ದು ಒಟ್ಟು 503* ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2023ರ ಆವೃತ್ತಿಯಲ್ಲಿ ಸತತ ಎರಡು ಅರ್ಧಶತಕವನ್ನು ಬಾರಿಸಿ 125* ರನ್ ಗಳಿಸಿದ್ದಾರೆ. ಕಳೆದೊಂದು ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಮಂಧಾನ ಈ ಟೂರ್ನಿಯ ಮೂಲಕ ಮತ್ತೆ ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ.
ಇದೇ ವರ್ಷ ನಡೆದ ಮೊದಲ ಆವೃತ್ತಿಯ ಡಬ್ಲ್ಯುಪಿಎಲ್(ಮಹಿಳಾ ಕ್ರಿಕೆಟ್ ಪೀಮಿಯರ್ ಲೀಗ್) ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಮಂಧಾನ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಪ್ರತಿ ಪಂದ್ಯದಲ್ಲಿಯೂ ಒಂದಂಕಿಗೆ ಸೀಮಿತರಾಗಿದ್ದರು. ಇತ್ತೀಚೆಗೆ ನಡೆದಿದ್ದ ಬಾಂಗ್ಲಾ ಪ್ರವಾಸದಲ್ಲಿಯೂ ನೀರಸ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದರು. ಆದರೆ ದಿ ಹಂಡ್ರೆಡ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.