ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ನೂತನ ಐಸಿಸಿ ಟಿ20 ರ‍್ಯಾಂಕಿಂಗ್(T20 Ranking) ನಲ್ಲಿ ದ್ವಿತೀಯ ಸ್ಥಾನಕೇರುವ ಮೂಲಕ ವೃತ್ತಿಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಮಹಿಳೆಯರ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಬ್ಯಾಟರ್ ಆಗಿರುವ ಮಂಧಾನ, ಇದೀಗ ಟಿ20 ಕ್ರಿಕೆಟ್‌ನಲ್ಲಿ 2ನೇ ಶ್ರೇಯಾಂಕ ಅಲಂಕರಿಸಿದ್ದಾರೆ. ಏಷ್ಯಾ ಕಪ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸ್ಮೃತಿ ಮಂಧಾನ, ಕೇವಲ 25 ಎಸೆತಗಳಲ್ಲಿ 51 ರನ್ ಸಿಡಿಸಿ ಭಾರತ ತಂಡಕ್ಕೆ 8 ವಿಕೆಟ್‌ಗಳ ಜಯ ತಂದಿದ್ದರು. ಮಂಧಾನ, ಸದ್ಯ 730 ರೇಟಿಂಗ್‌ನೊಂದಿಗೆ 2ನೇ ಶ್ರೇಯಾಂಕ ಹೊಂದಿದ್ದಾರೆ. 13 ಅಂಕಗಳ ಅಂತರದಲ್ಲಿ ಮುಂದಿರುವ ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರಸ್ಥಾನದಲ್ಲಿದ್ದಾರೆ.
ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡ ಶ್ರೇಷ್ಠ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ದೀಪ್ತಿ ಅಮೋಘ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ದೀಪ್ತಿ, ತಮ್ಮ 4 ಓವರ್‌ಗಳಲ್ಲಿ ಕೇವಲ 7 ರನ್ ಮಾತ್ರವೇ ನೀಡಿದ್ದರು. ಇದಕ್ಕೂ ಮುನ್ನ ಥಾಯ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 3 ವಿಕೆಟ್ ಪಡೆದ ಸಾಧನೆ ಮೆರೆದಿದ್ದರು. ಒಟ್ಟಾರೆ 13 ವಿಕೆಟ್‌ಗಳನ್ನು ಪಡೆದ ದೀಪ್ತಿ, ಈಗ ಬೌಲರ್‌ಗಳ ಶ್ರೇಯಾಂಕಪಟ್ಟಿಯಲ್ಲಿ 742 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೇಸ್ಟೋನ್ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ| ICC Chairman | ಸೌರವ್ ಗಂಗೂಲಿ ಅವರನ್ನು ಐಸಿಸಿಗೆ ಕಳುಹಿಸಿ ಬಿಸಿಸಿಐ ಅಧ್ಯಕ್ಷರಾಗಲು ಜಯ್ ಶಾ ಯೋಜನೆ!