Site icon Vistara News

Smriti Mandhana | ಟಿ20 ಮಾದರಿಯಲ್ಲಿ ಜೀವನಶ್ರೇಷ್ಠ ರ‍್ಯಾಂಕ್‌ ಪಡೆದ ಸ್ಮೃತಿ ಮಂಧಾನಾ

ICC Ranking

ದುಬೈ : ಭಾರತ ಮಹಿಳೆಯರ ತಂಡದ ಸ್ಟಾರ್ ಬ್ಯಾಟರ್‌ ಸ್ಮೃತಿ ಮಂಧಾನಾ ಅವರು ಟಿ೨೦ ರ‍್ಯಾಂಕ್‌ ಪಟ್ಟಿಯಲ್ಲಿ ಜೀವನಶ್ರೇಷ್ಠ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಂತೆಯೇ ಏಕ ದಿನ ಕ್ರಿಕೆಟ್‌ ಮಾದರಿಯಲ್ಲಿ ಅವರು ಏಳನೇ ರ‍್ಯಾಂಕ್‌ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ ಐಸಿಸಿ ರ‍್ಯಾಂಕ್‌ ಪಟ್ಟಿ ಮಂಗಳವಾರ ಬಿಡುಗಡೆಗೊಂಡಿತು.

ಭಾರತ ತಂಡದ ಎಡಗೈ ಆರಂಭಿಕ ಬ್ಯಾಟರ್‌ ಇಂಗ್ಲೆಂಡ್‌ ಪ್ರವಾಸದ ಮೂರು ಪಂದ್ಯಗಳ ಟಿ೨೦ ಸರಣಿಯಲ್ಲಿ ಒಟ್ಟಾರೆ ೧೧೧ ರನ್‌ಗಳನ್ನು ಬಾರಿಸಿದ್ದರು. ಈ ಪ್ರದರ್ಶನದೊಂದಿಗೆ ಅವರು ಎರಡು ಸ್ಥಾನಗಳ ಬಡ್ತಿ ಪಡೆದುಕೊಂಡು ದ್ವಿತೀಯ ಸ್ಥಾನಕ್ಕೇರಿದರು. ಏಕ ದಿನ ಮಾದರಿಯಲ್ಲಿ ಮಾಜಿ ನಂಬರ್ ಒನ್‌ ಆಟಗಾರ್ತಿಯಾಗಿದ್ದ ಸ್ಮೃತಿ ಮಂಧಾನಾ, ಹೊಸದಾಗಿ ಬಿಡುಗಡೆಗೊಂಡ ಏಕ ದಿನ ರ‍್ಯಾಂಕ್‌ ಪಟ್ಟಿಯಲ್ಲೂ ಮೂರು ಸ್ಥಾನ ಜಿಗಿತ ಕಂಡಿದ್ದು, ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ೯೧ ರನ್‌ ಬಾರಿಸಿದ್ದರು.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರೂ ನಾಲ್ಕು ಸ್ಥಾನ ಮೇಲಕ್ಕೇರುವ ಮೂಲಕ ೯ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಆಲ್‌ರೌಂಡರ್‌ ದೀಪ್ತಿ ಶರ್ಮ ಒಂದು ಸ್ಥಾನ ಬಡ್ತಿಯೊಂದಿಗೆ ೩೨ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ವಿಕೆಟ್‌ಕೀಪರ್ ಬ್ಯಾಟರ್‌ ಯಸ್ತಿಕಾ ಭಾಟಿಯಾ ಅವರು ಎಂಟು ಸ್ಥಾನ ಬಡ್ತಿಯೊಂದಿಗೆ ೩೭ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ದೀಪ್ತಿ ಶರ್ಮ ಅವರು ಬೌಲರ್‌ಗಳ ಪಟ್ಟಿಯಲ್ಲಿ ೧೨ನೇ ರ‍್ಯಾಂಕ್‌ ಪಡೆದುಕೊಂಡಿದ್ದು, ಒಟ್ಟು ಆರು ಸ್ಥಾನ ಮುಂಬಡ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ಸಹ ಆಟಗಾರ್ತಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಿಸಿದ ಸ್ಮೃತಿ ಮಂಧಾನಾ, ಯಾರವರು?

Exit mobile version