Site icon Vistara News

Smriti Mandhana: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಸ್ಮೃತಿ ಮಂಧಾನ

smriti mandhana

ಮುಂಬಯಿ: ಭಾರತ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ(Smriti Mandhana) ಟಿ20 ಕ್ರಿಕೆಟ್​ನಲ್ಲಿ(T20 Cricket) ದಾಖಲೆಯೊಂದನ್ನು ಬರೆದಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ಮಂಧಾನ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ಮೂರು ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದರು.

ಮಂಧಾನ ಟಿ20 ಕ್ರಿಕೆಟ್​ನಲ್ಲಿ ಮೂರು ಸಾವಿರ ರನ್​ ಪೂರ್ತಿಗೊಳಿಸುವ ಮೂಲಕ ಭಾರತೀಯ ಪುರುಷರ ತಂಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ ಜತೆಗೆಗಿನ ಎಲೈಟ್​ ಪಟ್ಟಿ ಸೇರ್ಪಡೆಗೊಂಡರು. ಜತೆಗೆ ವೇಗವಾಗಿ ಟಿ20 ಕ್ರಿಕೆಟ್‌ನಲ್ಲಿ 3000 ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಕಡಿಮೆ ಇನಿಂಗ್ಸ್​ನಲ್ಲಿ ಮೂರು ಸಾವಿರ ಟಿ20 ರನ್​ ಮಾಡಿದ ಭಾರತೀಯ ಆಟಗಾರ್ತಿ ಎನ್ನುವ ದಾಖಲೆ ಹರ್ಮನ್‌ಪ್ರೀತ್ ಕೌರ್ ಹೆಸರಿನಲ್ಲಿತ್ತು. ಕಳೆದ ವರ್ಷ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಕೌರ್​ ತಮ್ಮ 135ನೇ ಇನ್ನಿಂಗ್ಸ್‌ನಲ್ಲಿ 3000 ರನ್ ತಲುಪಿದ್ದರು. ಇದೀಗ ಮಂಧಾನ ಕೇವಲ 126 ಇನಿಂಗ್ಸ್​ನಲ್ಲಿ 3052* ರನ್​ ಗಳಿಸಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಇದನ್ನೂ ಓದಿ INDW vs AUSW: ಸ್ಮೃತಿ, ಶಫಾಲಿ ಬೊಂಬಾಟ್​ ಬ್ಯಾಟಿಂಗ್​; ಆಸೀಸ್​ಗೆ ಹೀನಾಯ ಸೋಲು

2013ರಲ್ಲಿ 17 ವರ್ಷದಲ್ಲಿ ಮಂಧಾನ ಭಾರತ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಎಡಗೈ ಆರಂಭಿಕ ಆಟಗಾರ್ತಿಯಾಗಿರುವ ಅವರು ಬಳಿಕ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿ ಸ್ಥಾನ ಪಡೆದರು. ಟಿ20ಯಲ್ಲಿ ಒಟ್ಟು 23 ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್​ನಿಂದ 54 ರನ್​ ಗಳಿಸಿ ಗೆಲುವಿಗೆ 5 ರನ್​ ಬೇಕಿದ್ದಾಗ ವಿಕೆಟ್​ ಕೈ ಚೆಲ್ಲಿದರು. ಸಿಕ್ಸರ್​ಗೆ ಬಾರಿಸಿದ ಚೆಂಡನ್ನು ಬೌಂಡರಿ ಲೈನ್​​ನಲ್ಲಿ ತಾಲಿಯಾ ಮೆಕ್‌ಗ್ರಾತ್ ಯಾರೂ ಊಹಿಸಿದ ರೀತಿಯಲ್ಲಿ ಮೇಲಕ್ಕೆ ಜಿಗಿದು ಕ್ಯಾಚ್​ ಹಿಡಿಯುವ ಮೂಲಕ ಈ ವಿಕೆಟ್​ ಪತನಕ್ಕೆ ಕಾರಣರಾದರು.

ಪಂದ್ಯ ಗೆದ್ದ ಭಾರತ


ನವಿ ಮುಂಬಯಿಯ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರುವ ಮೂಲಕ ಎದುರಾಳಿ ಆಸೀಸ್​ ತಂಡವನ್ನು 19.2 ಓವರ್​ಗಳಲ್ಲಿ 141 ರನ್​ಗೆ ಕಟ್ಟಿ ಹಾಕಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ ಬ್ಯಾಟಿಂಗ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ 17.4 ಓವರ್​ನಲ್ಲಿ ಕೇವಲ ಒಂದು ವಿಕೆಟ್​ ಕಳೆದುಕೊಂಡು 145 ರನ್​ ಬಾರಿಸಿ 9 ವಿಕೆಟ್​ ಅಂತರದಿಂದ ಗೆದ್ದು ಬೀಗಿತು. ಶಫಾಲಿ ವರ್ಮ(64*) ಮತ್ತು ಸ್ಮೃತಿ ಮಂಧಾನ(54) ಅವರ ಅರ್ಧಶತಕ, ಬೌಲಿಂಗ್​ನಲ್ಲಿ ಟಿಟಾಸ್‌ ಸಾಧು(4 ವಿಕೆಟ್​) ಪರಾಕ್ರಮ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Exit mobile version