ನವ ದೆಹಲಿ: ಕೆಲವು ಜಡ್ಜ್ಗಳು ದೇಶದ್ರೋಹಿಗಳ ಗ್ಯಾಂಗ್ನ ಭಾಗವಾಗಿದ್ದಾರೆ. ಅವರೆಲ್ಲರೂ ಅದಕ್ಕೆ ತಕ್ಕ ಪಾಠ ಕಲಿಯುತ್ತಾರೆ ಎಂಬುದಾಗಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಆರೋಪಿಸಿದ್ದಾರೆ. ಇಂಡಿಯಾ ಟುಡೆ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ನ್ಯಾಯಾಧೀಶರ ಕಾರ್ಯಾಗಾರದಲ್ಲಿ ಮಾತನಾಡಿದ್ದ ಕೆಲವು ನ್ಯಾಯಮೂರ್ತಿಗಳು, ಭಾರತದ ನ್ಯಾಯಾಂಗದ ಮೇಲೆ ಕಾರ್ಯಾಂಗ ಸವಾರಿ ಮಾಡುತ್ತಿದೆ ಎಂದು ಹೇಳಿದ್ದರು. ಬಾರ್ ಆ್ಯಂಡ್ ಬೆಂಚ್ ವೆಬ್ಸೈಟ್ ಈ ಸುದ್ದಿಯನ್ನು ಪ್ರಕಟಿಸಿತ್ತು. ಈ ಹೇಳಿಕೆಯನ್ನು ಉಲ್ಲೇಖಿಸಿದ ಕಿರಣ್ ರಿಜಿಜು ಅವರು ಮಾತನಾಡಿದ್ದಾರೆ.
ಕೆಲವೊಬ್ಬರು ನಿವೃತ್ತ ನ್ಯಾಯಾಧೀಶರು ಹೋರಾಟಗಾರರಾಗಿ ಬದಲಾಗುತ್ತಿದ್ದಾರೆ ಹಾಗೂ ದೇಶ ವಿರೋಧಿ ಗ್ಯಾಂಗ್ ಸೇರಿಕೊಂಡಿದ್ದಾರೆ. ಅವರು ನ್ಯಾಯಾಂಗ ವ್ಯವಸ್ಥೆಯನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಡ್ಜ್ಗಳಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರುವುದಿಲ್ಲ ಹಾಗಾದರೆ ಅವರು ಕಾರ್ಯಾಂಗದ ವಿರುದ್ಧ ಟೀಕೆ ಮಾಡಲು ಹೇಗೆ ಸಾಧ್ಯ. ದೇಶಕ್ಕೆ ವಿರುದ್ಧವಾಗಿ ಮಾತನಾಡುವ ಯಾರು ಕೂಡ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದೇಶವೇ ಅವರಿಗೆ ತಿರುಗೇಟು ನೀಡಲಿದೆ ಎಂದು ರಿಜಿಜು ಹೇಳಿದರು.
ಕಿರಣ್ ರಿಜಿಜು ಅವರು ಇದೇ ವೇಳೆ ನ್ಯಾಯವಾದಿಗಳನ್ನು ಜಡ್ಜ್ಗಳನ್ನಾಗಿ ನೇಮಕ ಮಾಡುವ ಪ್ರಕ್ರಿಯೆಗೆ ಬೆಂಬಲ ಸೂಚಿಸಿದರು. ನಮ್ಮ ನಿಲುವು ಸ್ಪಷ್ಟವಾಗಿದೆ. ಕೊಲಿಜಿಯಮ್ ವ್ಯವಸ್ಥೆ ಎಷ್ಟು ದಿನ ಇರುತ್ತದೊ, ನ್ಯಾಯ ಸಮ್ಮತವಾಗಿ ಅವುಗಳ ನಿಯಮವನ್ನು ಅನುಸರಿಸಲಾಗುತ್ತದೆ. ಆದರೆ, ನ್ಯಾಯಾಲಯದ ಆದೇಶದ ಪ್ರಕಾರ ಜಡ್ಜ್ಗಳನ್ನು ನೇಮಕ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಜಡ್ಜ್ಗಳ ನೇಮಕವನ್ನು ಆಡಳಿತಾತ್ಮಕವಾಗಿ ಮಾಡಬೇಕಾಗಿದೆ. ಯಾರು ನೇಮಕ ಮಾಡಬೇಕು ಎಂಬ ಗೊಂದಲ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ನ್ಯಾಯಾಧೀಶರನ್ನು ಆಯ್ಕೆ ಮಾಡುವ ವೇಳೆ ಸರಕಾರದ ಅಭಿಪ್ರಾಯವನ್ನು ಪರಿಗಣಿಸಬೇಕು ಹಾಗೂ ಕನಿಷ್ಠ ಪಕ್ಷ ಕಾನೂನು ಸಚಿವರ ಒಪ್ಪಿಗೆಯನ್ನು ಪಡೆಯಬೇಕು. ಸಂವಿಧಾನ ಕೂಡ ಅದಕ್ಕೆ ಒಪ್ಪುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಕಿರಣ್ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟನ್ ಸಂಸದರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಖಂಡಿಸಿದರು. ಭಾರತದಲ್ಲಿ ಯಾರು ಹೆಚ್ಚು ಮಾತನಾಡುತ್ತಿದ್ದಾರೋ ಅವರೇ ಮಾತನಾಡಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ. ಇದೇ ವೇಳೆ ಅವರು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೂ ದುರ್ಬಲಗೊಳಿಸಲಾಗುತ್ತದೆ ಎಂಬ ರಾಹುಲ್ ಗಾಂಧಿಯ ಆರೋಪವನ್ನು ನಿರಾಕರಿಸಿದರು. ಈ ರೀತಿಯ ಯಾರಾದರೂ ಹೇಳಿಕೆ ಕೊಟ್ಟಿದ್ದರೆ ಅದು ದೊಡ್ಡ ಪ್ರಮಾದ. ನಮ್ಮ ನ್ಯಾಯಮೂರ್ತಿಗಳು ಯಾರೂ ದುರ್ಬಲರಲ್ಲ ಎಂದು ಹೇಳಿದರು.