ಕೋಲ್ಕೊತಾ: ಟೀಮ್ ಇಂಡಿಯಾದ ಮಾಜಿ ನಾಯಕ, ದಾದಾ ಖ್ಯಾತಿಯ ಸೌರವ್ ಗಂಗೂಲಿ(Sourav Ganguly Biopic) ಅವರ ಜೀವನಾಧಾರಿತ ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದ್ದು, ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್(Ranbir Kapoor) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಗಂಗೂಲಿ ಅವರ ಆಪ್ತ ಮೂಲಗಳ ಪ್ರಕಾರ ರಣಬೀರ್ ಕಪೂರ್ ದಾದಾ ಕ್ರಿಕೆಟ್ ಜರ್ನಿಗೆ ಹೀರೋ ಆಗಲಿದ್ದಾರೆ ಎಂಬುದು ಖಚಿತವಾಗಿದೆ. ಈ ಹಿಂದೆ ರಣಬೀರ್ ಕಪೂರ್ ಡೇಟ್ ಸಮಸ್ಯೆಗಳಿಂದ ಈ ಬಯೋಪಿಕ್ ನಿಂದ ಹಿಂದೆ ಸರಿದಿದ್ದರು. ಇದೀಗ ಅವರೇ ಈ ಸಿನೆಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಂದಿಲ್ಲ.
2019ರಲ್ಲಿ ಗಂಗೂಲಿ ಬಯೋಪಿಕ್ನಲ್ಲಿ ನಟಿಸಲು ಹೃತಿಕ್ ರೋಷನ್, ರಣಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿ ಅನೇಕ ಬಾಲಿವುಡ್ ನಟರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಅಂತಿಮವಾಗಿ ರಣಬೀರ್ ಹೆಸರು ಫೈನಲ್ ಆಗಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಧೋನಿಯೂ ಇರಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಚಿತ್ರಕ್ಕೆ ನಿರ್ದೇಶಕ, ನಿರ್ಮಾಪಕ ಯಾರು ಎಂಬುದು ತಿಳಿದುಬಂದಿಲ್ಲ.
ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಕೋಲ್ಕೊತಾದಲ್ಲಿ ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ರಣಬೀರ್ ಕಪೂರ್ ಅವರು ಸೌರವ್ ಗಂಗೂಲಿ ಅವರ ಮನೆ, ಈಡನ್ ಗಾರ್ಡನ್ಸ್ ಕ್ರೀಡಾಂಗಣ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಈ ಸುದ್ದಿ ಕೇಳಿ ಗಂಗೂಲಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ತಮ್ಮ ನೆಚ್ಚಿನ ಆಟಗಾರನ ರೋಚಕ ಕ್ರಿಕೆಟ್ ಜರ್ನಿಯನ್ನು ತೆರೆ ಮೆಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.