Site icon Vistara News

BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್‌ ಗಂಗೂಲಿ

BCCI

ಕೋಲ್ಕೊತಾ : ಬಿಸಿಸಿಐ ಅಧ್ಯಕ್ಷ (BCCI President) ಸ್ಥಾನಕ್ಕೆ ಎರಡನೇ ಅವಧಿಗೆ ಮಾಜಿ ಬ್ಯಾಟರ್‌ ಸೌರವ್‌ ಗಂಗೂಲಿ ಅವರನ್ನು ಮುಂದುವರಿಸದಿರುವ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಪಶ್ಚಿಮ ಬಂಗಾಳ ಚುನಾವಣೆ ವೇಳೆ ಬಿಜೆಪಿಗೆ ನೆರವು ನೀಡದ ಸೌರವ್‌ ಗಂಗೂಲಿ ಅವರನ್ನು ಮುಂದುವರಿಸದೇ ಇರಲು ಬಿಜೆಪಿ ನಿರ್ಧರಿಸಿದೆ ಎಂಬುದಾಗಿ ತೃಣಮೂಲ ಕಾಂಗ್ರೆಸ್‌ ಆರೋಪಿಸಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಸೌರವ್‌ ಗಂಗೂಲಿ ಗುರುವಾರ ಈ ಬಗ್ಗೆ ಮೌನ ಮುರಿದಿದ್ದು, ತಮಗೆ ಅಧಿಕಾರದಲ್ಲಿ ಮುಂದುವರಿಯಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.

ಕೋಲ್ಕೊತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ಅವಧಿಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ. “ನಾನು ಐದು ವರ್ಷಗಳ ಕಾಲ ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ ಅಧ್ಯಕ್ಷನಾಗಿದ್ದೆ. ಅಂತೆಯೇ ಬಿಸಿಸಿಐ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದೆ. ಇಷ್ಟೆಲ್ಲ ಸೇವೆ ಮಾಡಿದ ಬಳಿಕ ನಿರ್ಗಮಿಸಲೇಬೇಕು. ಒಬ್ಬ ಆಡಳಿತಗಾರನಾಗಿ ಹೊಸತನ್ನು ಮಾಡಬೇಕು ಹಾಗೂ ತಂಡಕ್ಕೆ ಏನಾದರೂ ಕೊಡಲೇಬೇಕು. ಸಾಕಷ್ಟು ವರ್ಷಗಳ ಕಾಲ ಆಟಗಾರನಾಗಿದ್ದ ನನಗೆ ಇವೆಲ್ಲವೂ ಅರ್ಥವಾಗುತ್ತದೆ. ಆಡಳಿತಗಾರನಾಗಿ ನನ್ನ ಅವಧಿಯನ್ನು ಚೆನ್ನಾಗಿ ನಿರ್ವಹಿಸಿದ್ದೇನೆ. ಅಂತೆಯೇ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ ಮತ್ತು ಆಡಳಿತದಲ್ಲೂ ದೀರ್ಘ ಕಾಲ ಉಳಿಯುವುದು ಸಾಧ್ಯವಿಲ್ಲ,” ಎಂಬುದಾಗಿ ಅವರು ಹೇಳಿದ್ದಾರೆ.

ದೇಶಕ್ಕಾಗಿ ಆಡುವುದೇ ನನ್ನ ಪಾಲಿನ ಅತ್ಯಂತ ಖುಷಿಯ ಕ್ಷಣವಾಗಿತ್ತು. ಅದಾದ ಬಳಿಕವೂ ನಾನು ಉತ್ತಮ ಸಂಗತಿಗಳನ್ನು ಕಂಡಿದ್ದೇನೆ. ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷನಾಗಿದ್ದೆ ಹಾಗೂ ಬಿಸಿಸಿಐ ಅಧ್ಯಕ್ಷನಾಗಿಯೂ ಇದ್ದೆ. ಹೀಗಾಗಿ ಇನ್ನೂ ದೊಡ್ಡ ಸಂಗತಿಗಳನ್ನು ಮಾಡಬೇಕಾಗಿದೆ. ಆದರೆ, ತಂಡದಲ್ಲಿ ಆಡಿದ ೧೫ ವರ್ಷಗಳೇ ಅತ್ಯಂತ ಖುಷಿಯಿಂದ ಇದ್ದೆ,” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Jasprit Bumrah | ಬುಮ್ರಾ ಇನ್ನೂ ತಂಡದಿಂದ ಹೊರಬಿದ್ದಿಲ್ಲ, ಕಾದು ನೋಡೋಣ ಎಂದ ಗಂಗೂಲಿ

Exit mobile version