ಕೋಲ್ಕೊತಾ: ಫಾರ್ಮ್ ಕಳೆದುಕೊಂಡು ಟೀಕಾಸ್ತ್ರಗಳನ್ನು ಎದುರಿಸುತ್ತಿರುವ Virat kohli ಬೆಂಬಲಕ್ಕೆ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಂತಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಯಲ್ಲಿರುವ ಬ್ಯಾಟರ್. ಅವರು ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಹಿರಿಯ ಕ್ರಿಕೆಟಿಗರು ನಿರಂತರವಾಗಿ ಅವರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದು ಸಹಜವಾಗಿ ಕೊಹ್ಲಿಯ ಮೇಲೆ ಒತ್ತಡ ಸೃಷ್ಟಿಸುತ್ತಿದೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು, ಶೀಘ್ರದಲ್ಲೇ ತಮ್ಮ ಹಳೆ ಖದರ್‌ನೊಂದಿಗೆ Virat kohli ಆಡಲಿದ್ದಾರೆ, ಎಂದು ಹೇಳಿದ್ದಾರೆ.
“ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ Virat kohli ಸಾಧನೆಯನ್ನು ಗಮನಿಸಿದ್ದೀರಿ. ಬ್ಯಾಟ್ಸ್‌ಮನ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಗುಣಮಟ್ಟದ ಆಟಗಾರನಿಗೆ ಮಾತ್ರ ಅಷ್ಟೊಂದು ಸಾಧನೆ ಮಾಡಲು ಸಾಧ್ಯ. ಸದ್ಯ ಅವರಿಗೆ ಕೆಟ್ಟ ದಿನಗಳು ಎದುರಾಗಿವೆ. ಖಂಡಿತವಾಗಿಯೂ ಅವರು ಫಾರ್ಮ್‌ಗೆ ಮರಳಲಿದ್ದಾರೆ,ʼʼ ಎಂದು ದಾದಾ ಹೇಳಿದ್ದಾರೆ.
ಅವರೇನೆಂದು ಗೊತ್ತು
ವಿರಾಟ್ ಕೊಹ್ಲಿ ಕಳೆದ ೧೨ರಿಂದ ೧೩ ವರ್ಷ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ತಮ್ಮ ಜವಾಬ್ದಾರಿ ಏನೆಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಉತ್ತಮ ಪ್ರದರ್ಶನ ಕಂಡುಕೊಳ್ಳುವುದಕ್ಕೆ ಅವರು ಶ್ರಮ ವಹಿಸಿದರೆ ಸಾಕು ಎಂಬುದು ಗಂಗೂಲಿಯ ಅಭಿಪ್ರಾಯ.
ಕ್ರೀಡೆಯಲ್ಲಿ ಇಂಥದ್ದೆಲ್ಲ ಸಂಭವಿಸುತ್ತದೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ನನ್ನ ವಿರುದ್ಧವೂ ಈ ರೀತಿಯ ಟೀಕೆಗಳು ಕೇಳಿ ಬಂದಿದ್ದವು. ಆಟಗಾರನಾಗಿ ಇದಕ್ಕೆಲ್ಲ ಸಿದ್ಧರಾಗಿ ಇರಬೇಕಾಗುತ್ತದೆ. ಆಟದ ಬಗ್ಗೆ ಮಾತ್ರ ಗಮನ ಕೊಡಬೇಕಾಗಿದೆ,ʼʼ ಎಂದ ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ: Ireland Tour | ಟೀಮ್ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್