ಮುಂಬಯಿ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರಿಗೆ ಏಕದಿನ ವಿಶ್ವಕಪ್(ICC World Cup 2023) ತಂಡದಲ್ಲಿ ಸ್ಥಾನ ನೀಡುವಂತೆ ಸೌರವ್ ಗಂಗೂಲಿ(Sourav Ganguly) ಆಗ್ರಹಿಸಿದ್ದಾರೆ. ಎಡಗೈ ಆಟಗಾರ ಜೈಸ್ವಾಲ್ ವಿಂಡೀಸ್ ವಿರುದ್ಧ 171 ರನ್ ಬಾರಿಸಿದ್ದರು. ಅವರ ಬ್ಯಾಟಿಂಗ್ ಸಾಹಸದಿಂದ ಭಾರತ ಇನಿಂಗ್ಸ್ ಮತ್ತು 141 ರನ್ಗಳಿಂದ ಗೆಲುವು ಸಾಧಿಸಿತು.
ಭಾರತ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಆಟಗಾರರ ಸಾರ್ಟ್ ಲೀಸ್ಟ್ ಕೂಡ ಸಿದ್ಧಪಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕರಾಗಿದ್ದ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಗೆ ಸೂಕ್ತ ಸಲಹೆಯೊಂದನ್ನು ನೀಡಿದ್ದಾರೆ. ಯಶಸ್ವಿ ಜೈಸ್ವಾಲ್ ಅವರನ್ನು ಏಕದಿನ ಟೂರ್ನಿಗೆ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
“ಪದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸುವುದು ಅಷ್ಟು ಸುಲಭದ ಮಾತಲ್ಲ. ಇದು ದೊಡ್ಡ ಸಾಧನೆ. ನಾನು ಕೂಡ ಈ ದಾಖಲೆ ನಿರ್ಮಿಸಿದ್ದೇನೆ. ಆದ್ದರಿಂದ ಅದರ ಮಹತ್ವವನ್ನು ನಾನು ಚೆನ್ನಾಗಿ ತಿಳಿದಿದ್ದೇನೆ. ಜೈಸ್ವಾಲ್ ಅವರ ಬ್ಯಾಟಿಂಗ್ ಗಮನಿಸುವಾಗ ಆತ ಉತ್ತಮ ಕ್ರಿಕೆಟ್ ಆಡುವುದು ಕಂಡುಬಂದಿದೆ. ಆತ ಉತ್ತಮ ಆಟಗಾರ. ಅದರಲ್ಲೂ ಭಾರತ ತಂಡಕ್ಕೆ ಹಲವು ವರ್ಷಗಳಿಂದ ಉತ್ತಮ ಎಡಗೈ ಆರಂಭಿಕ ಆಟಗಾರ ಲಭ್ಯವಾಗಿಲ್ಲ. ಹೀಗಿರುವಾಗ ಜೈಸ್ವಾಲ್ ಆಯ್ಕೆ ತಂಡಕ್ಕೆ ಉತ್ತಮ ಲಾಭ ನೀಡಲಿದೆ” ಎಂದು ಗಂಗೂಲಿ ಅಭಿಪ್ರಾಯಪಟ್ಟರು.
“ಐಪಿಎಲ್ ಅವಧಿಯಿಂದಲೂ ಜೈಸ್ವಾಲ್ ಅವರ ಬ್ಯಾಟಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಬ್ಯಾಟಿಂಗ್ ಪ್ರದರ್ಶನವನ್ನು ನೋಡುವಾಗ ಅವರು ದೀರ್ಘ ಕಾಲದವರೆಗೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಭರವಸೆ ನನಗಿದೆ” ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ IND vs WI: ಮೊದಲ ಶತಕ, ಜೈಸ್ವಾಲ್ ಭಾವುಕ
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿಯೂ ಸ್ಥಾನ ಪಡೆದಿರುವ ಜೈಸ್ವಾಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಒಂದೊಮ್ಮೆ ಅವರು ಏಕದಿದಲ್ಲಿಯೂ ಮಿಂಚಿದರೆ ಗಂಗೂಲಿಯ ಆಗ್ರಹದಂತೆ ವಿಶ್ವ ಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಬಹುದು. ಚೀನಾದಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ.
ಸದ್ಯ ಜೈಸ್ವಾಲ್ ಗುರುವಾರದಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ತೋರುವತ್ತ ಚಿತ್ತ ನೆಟ್ಟಿದ್ದಾರೆ. ಈ ಪಂದ್ಯದಲ್ಲಿಯೂ ಶತಕ ಬಾರಿಸಿ ಮಿಂಚಿದರೆ ಟೆಸ್ಟ್ ಶ್ರೇಯಾಂಕದಲ್ಲಿ ಭಾರಿ ಜಿಗಿತ ಕಂಡು ಜೀವನಶ್ರೇಷ್ಠ ಸಾಧನೆ ಮಾಡಲಿದ್ದಾರೆ.