ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಸಂಘಟಿತ ಹೋರಾಟ ನಡೆಸಿದ ದಕ್ಷಿಣ ಆಫ್ರಿಕಾ ತಂಡದ ಮಹಿಳೆಯರು, ಟಿ20 ವಿಶ್ವ ಕಪ್ನ(T20 World Cup) ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 6 ರನ್ ವಿಜಯ ಸಾಧಿಸಿ ಫೈನಲ್ಗೆ ಪ್ರವೇಶ ಪಡೆದರು. ಗುರುವಾರ ನಡೆದ ಹಣಾಹಣಿಯಲ್ಲಿ ಭಾರತ ತಂಡವನ್ನು ಮಣಿಸಿದ್ದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ನ್ಯೂಲ್ಯಾಂಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬಳಗ ತನ್ನ ಪಾಲಿನ 20 ಓವರ್ಗಳು ಪೂರ್ಣಗೊಂಡಾಗ 8 ವಿಕೆಟ್ ನಷ್ಟಕ್ಕೆ 158 ರನ್ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರ ಲಾರಾ ವೋಲ್ವರ್ತ್ (53) ಹಾಗೂ ತಜ್ಮಿನ್ ಬ್ರಿಟ್ (68) ಅರ್ಧ ಶತಕಗಳನ್ನು ಬಾರಿಸಿದರಲ್ಲದೆ, ಮೊದಲ ವಿಕೆಟ್ಗೆ 96 ರನ್ ಪೇರಿಸಿದರು. ಮರಿಜಾನೆ ಕಾಪ್ 13 ಎಸೆತಗಳಲ್ಲಿ 27 ರನ್ ಬಾರಿಸಿದರು.
ಇದನ್ನೂ ಓದಿ : ICC Women’s T20 World Cup : ರೋಹಿತ್ ದಾಖಲೆ ಮುರಿದ ಹರ್ಮನ್ಪ್ರೀತ್ ಕೌರ್ ವಿಶ್ವದಾಖಲೆಯೂ ಬರೆದರು; ಏನದು ಸಾಧನೆ?
ಗುರಿ ಬೆನ್ನಟ್ಟಲು ಶುರು ಮಾಡಿದ ಇಂಗ್ಲೆಂಡ್ ತಂಡವೂ ಮೊದಲ ವಿಕೆಟ್ಗೆ 53 ರನ್ ಪೇರಿಸಿತು. ಅಲೈಸ್ ಕಾಪ್ಸಿ (40) ಹಾಗೂ ನ್ಯಾಟ್ ಸ್ಕೀವರ್ ಬ್ರಂಟ್ (31) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು. ಆದರೆ, ಉಳಿದವರ ನೆರವು ಸಿಗದೇ ಆರು ರನ್ಗಳಿಂದ ಸೋಲೊಪ್ಪಿಕೊಂಡಿತು.