Site icon Vistara News

T20 Cricket : ಒಡಿಐನಲ್ಲಿ ದಾಖಲೆ ಬರೆದಿದ್ದ ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲೂ ಮಾಡಿತು ವರ್ಲ್ಡ್​ ರೆಕಾರ್ಡ್​

South Africa who made a record in ODI also made a record in T20 series

#image_title

ಸೆಂಚುರಿಯನ್​: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20 Cricket) ದಕ್ಷಿಣ ಆಫ್ರಿಕಾ ತಂಡ ಭಾನುವಾರ (ಮಾರ್ಚ್ 26) ಐತಿಹಾಸಿಕ ದಾಖಲೆ ಮಾಡಿದೆ. ಪ್ರವಾಸಿ ವೆಸ್ಟ್‌ ಇಂಡೀಸ್‌ ನೀಡಿದ್ದ 259 ರನ್‌ಗಳ ಗುರಿಯನ್ನು ಇನ್ನು 7 ಎಸೆತಗಳು ಬಾಕಿ ಇರುವಾಗಲೇ ಮೆಟ್ಟಿನಿಂತ ಹರಿಣ ಪಡೆ, ಟಿ20-ಐ ಕ್ರಿಕೆಟ್‌ನಲ್ಲಿ ಗರಿಷ್ಠ ರನ್​ಗಳ ಗುರಿಯನ್ನು ಮೆಟ್ಟಿ ನಿಂತು ಸಾಧನೆ ಮಾಡಿತು. ಅಂದಹಾಗೆ ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್‌ನಲ್ಲೂ ಗರಿಷ್ಠ ರನ್‌ಗಳ ಗುರಿ ಬೆನ್ನತ್ತಿ ಗೆದ್ದ ವಿಶ್ವ ದಾಖಲೆ ಹೊಂದಿದೆ. 2005ರಲ್ಲಿ ಆಸ್ಟ್ರೇಲಿಯಾ ಎದುರು 435 ರನ್‌ಗಳ ಗುರಿ ಬೆನ್ನತ್ತಿ ಜಯ ದಾಖಲಿಸಿತ್ತು. ಈಗ ಟಿ20 ಮಾದರಿಯಲ್ಲೂ ರನ್​ಚೇಸ್​ ಮಾಡಿದ ದಾಖಲೆ ಸೃಷ್ಟಿಸಿದೆ.

ಸೂಪರ್‌ ಸ್ಪೋರ್ಟ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 258 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 18.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 259 ರನ್​ ಬಾರಿಸಿ ಗೆಲುವು ಸಾಧಿಸಿದ ಸಂಭ್ರಮಿಸಿತು. ಈ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್ ತಂಡದ ಬ್ಯಾಟರ್​ಗಳು 22 ಸಿಕ್ಸರ್​ ಸಿಡಿಸಿದರೆ 17 ಫೋರ್ ಬಾರಿಸಿದರು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು 27 ಫೋರ್​ಗಳನ್ನು ಬಾರಿಸಿದರೆ 13 ಸಿಕ್ಸರ್​ಗಳನ್ನು ಸಿಡಿಸಿದರು. ವೆಸ್ಟ್​ ಇಂಡೀಸ್ ತಂಡದ ಪರ ಜಾನ್ಸನ್​ ಚಾರ್ಲ್ಸ್​​ (118 ರನ್​, 46 ಎಸೆತ, 10 ಫೋರ್, 11 ಸಿಕ್ಸರ್​) ಶತಕ ಬಾರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್​ ಡಿ ಕಾಕ್​ (100 ರನ್​, 44 ಎಸೆತ, 9 ಪೋರ್​, 8 ಸಿಕ್ಸರ್​) ಶತಕ ಬಾರಿಸಿದರು.

ಐಸಿಸಿ ಮಾಡಿದ ಟ್ವೀಟ್​ ಇಲ್ಲಿದೆ

ಬೃಹತ್​ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಸ್ಪೋಟಕ ಆರಂಭ ಪಡೆಯಿತು. ಆರಂಭದಿಂದಲೂ ವಿಂಡೀಸ್‌ ಬೌಲರ್‌ಗಳನ್ನು ಬೆಂಡೆತ್ತಿದ ಹರಿಣ ಪಡೆಯ ಓಪನರ್‌ಗಳಾದ ಕ್ವಿಂಟನ್‌ ಡಿ’ಕಾಕ್‌ (100) ಉತ್ತಮ ಆರಂಭ ಪಡೆಯಲು ನೆರವಾದರು. ರೀಝಾ ಹೆಂಡ್ರಿಕ್ಸ್‌ (68) ಅರ್ಧ ಶತಕ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 65 ಎಸೆತಗಳಲ್ಲಿ 152 ರನ್‌ಗಳನ್ನು ಪೇರಿಸಿತು. ನಾಯಕ ಏಡೆನ್‌ ಮಾರ್ಕ್ರಮ್‌ 21 ಎಸೆತಗಳಲ್ಲಿ ಅಜೇಯ 38 ರನ್‌ ಬಾರಿಸಿ 19ನೇ ಓವರ್‌ನಲ್ಲೇ ತಂಡವನ್ನು ಜಯದ ದಡ ಮುಟ್ಟಿಸಿದರು.

ಇದನ್ನೂ ಓದಿ : T20 Cricket : ಪಾಕಿಸ್ತಾನ ತಂಡಕ್ಕೆ ಮುಖಭಂಗ, ಅಫಘಾನಿಸ್ತಾನದಿಂದ ನೂತನ ದಾಖಲೆ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ಮೊದಲ ಓವರ್‌ನಲ್ಲೇ ಬ್ರೆಂಡನ್‌ ಕಿಂಗ್‌ (1) ವಿಕೆಟ್‌ ಕಳೆದುಕೊಂಡು ಕಂಗಾಲಾಯಿತು. ಆದರೆ, ಜಾನ್ಸನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ 46 ಎಸೆತಗಳಲ್ಲಿ 118 ರನ್‌ ಸಿಡಿಸಿದರು. ಅವರ ಈ ಸ್ಪೋಟಕ ಇನಿಂಗ್ಸ್‌ನಲ್ಲಿ 10 ಫೋರ್‌ ಮತ್ತು 11 ಸಿಕ್ಸರ್‌ಗಳು ಮೂಡಿಬಂದವು. 39ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಶತಕ ಪೂರೈಸಿದ ಚಾರ್ಲ್ಸ್‌, ಟಿ20-ಐ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಪರ ಅತಿ ವೇಗದ ಶತಕ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವಿಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಅವರ ಹೆಸರಲ್ಲಿತ್ತು. ಗೇಲ್‌ 2016ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಎದುರು 47 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

ಜಾನ್ಸನ್‌ ಜೊತೆಗೂಡಿ ಅಬ್ಬರಿಸಿದ ಓಪನರ್‌ ಕೈಲ್‌ ಮೇಯರ್ಸ್‌ 28 ಎಸೆತಗಳಲ್ಲಿ 51 ರನ್‌ ಕೊಡುಗೆ ಕೊಟ್ಟು ಔಟಾದರು. ಇನಿಂಗ್ಸ್‌ನ ಕೊನೇ ಓವರ್‌ಗಳಲ್ಲಿ ಸಿಡಿದೆದ್ದ ರೊಮಾರಿಯೊ ಶೆಫರ್ಡ್‌ ಕೇವಲ 18 ಎಸೆತಗಳಲ್ಲಿ 41 ರನ್‌ ಸಿಡಿಸಿ ಔಟಾಗದೆ ಉಳಿದರು ಪರಿಣಾಮ ತಂಡ 258 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

ಸರ್ಬಿಯಾ ತಂಡ ಹೆಸರಲ್ಲಿತ್ತು ದಾಖಲೆ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳನ್ನು ಚೇಸ್​ ಮಾಡಿದ ದಾಖಲೆ ಸರ್ಬಿಯಾ ತಂಡದ ಹೆಸರಿನಲ್ಲಿತ್ತು. ಬಲ್ಗೇರಿಯಾ ತಂಡ ನೀಡಿದ್ದ 246 ರನ್‌ಗಳ ಗುರಿಯನ್ನು ಭೇದಿಸಿತ್ತು. ಇನ್ನು ಪ್ರಮುಖ ತಂಡಗಳ ಪೈಕಿ ನ್ಯೂಜಿಲ್ಯಾಂಡ್​ ತಂಡ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಆಕ್ಲೆಂಡ್‌ನ ಈಡೆನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ 245 ರನ್‌ಗಳ ಗುರಿ ಬೆನ್ನಟ್ಟಿತ್ತು.

ಇನ್ನು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಈ ಪಂದ್ಯದಲ್ಲಿ ಒಟ್ಟಾರೆ 517 ರನ್‌ಗಳು ದಾಖಲಾಗಿವೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ಗಳಿಗೆ ಸಾಕ್ಷಿಯಾದ ಪಂದ್ಯ ಎಂಬ ದಾಖಲೆಗೂ ಪಾತ್ರವಾಗಿದೆ. ಮೂರು ಪಂದ್ಯಗಳ ಸರಣಿ ಇದೀಗ 1-1 ಅಂತರದಲ್ಲಿ ಸಮಬಲಗೊಂಡಿದ್ದು, ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯವು ಮಾರ್ಚ್‌ 28ರಂದು ನಡೆಯಲಿದೆ.

Exit mobile version