Site icon Vistara News

Kagiso Rabada: 500 ವಿಕೆಟ್​ಗಳ ಸರದಾರನಾದ ಕಗಿಸೊ ರಬಾಡ

Kagiso Rabada kept striking after lunch to rock India

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಯುವ ಬೌಲರ್​ ಕಗಿಸೊ ರಬಾಡ(Kagiso Rabada) ಅವರು ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಶ್ರೇಷ್ಠ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಭಾರತ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್​ ಕೀಳುವ ಮೂಲಕ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸೇರಿ 500 ವಿಕೆಟ್​ ಕಿತ್ತ ದಾಖಲೆ ಪಡೆದಿದ್ದಾರೆ.

ಭಾರತ ವಿರುದ್ಧ 59 ರನ್ ನೀಡಿ 5 ವಿಕೆಟ್​ ಕಬಳಿಸುವುದರೊಂದಿಗೆ ರಬಾಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ 7ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಶಾನ್ ಪೊಲಾಕ್​ (823), ಡೇಲ್ ಸ್ಟೇನ್ (697), ಮಖಾಯಾ ಎನ್ಟಿನಿ (661), ಅಲನ್ ಡೊನಾಲ್ಡ್ (602), ಜಾಕ್​ ಕಾಲಿಸ್ (572), ಮತ್ತು ಮೊರ್ನೆ ಮೊರ್ಕೆಲ್ (535) ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ರಬಾಡ ಸೇರ್ಪಡೆಗೊಂಡಿದ್ದಾರೆ.

ಅತಿ ಕಿರಿಯ ವಯಸ್ಸಿನಲ್ಲಿ ಈ ದಾಖಲೆ ಬರೆದ ಮೊದಲ ಬೌಲರ್​ ಎಂಬ ವಿಶ್ವದಾಖಲೆ ರಬಾಡ ತಮ್ಮ ಹೆಸರಿಗೆ ಬರೆದಿದ್ದಾರೆ. 28 ವರ್ಷದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. 2015 ರಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ ರಬಾಡ ಇದುವರೆಗೆ 61* ಟೆಸ್ಟ್ ಪಂದ್ಯಗಳನ್ನು ಆಡಿ 285* ವಿಕೆಟ್​ ಕಬಳಿಸಿದ್ದಾರೆ. 101 ಏಕದಿನ ಪಂದ್ಯಗಳಿಂದ 157* ವಿಕೆಟ್​, 56 ಟಿ20 ಪಂದ್ಯಗಳಿಂದ 58* ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ ಶತಕ ಬಾರಿಸಿ ತಂಡವನ್ನು ಕಾಪಾಡಿದ ರಾಹುಲ್​ಗೆ ಕ್ರಿಕೆಟ್​ ದೇವರು ಸಚಿನ್​ ಮೆಚ್ಚುಗೆ

ರೋಹಿತ್​ ವಿಕೆಟ್​ ಕಿತ್ತು ದಾಖಲೆ ಬರೆದ ರಬಾಡ

ಈ ಪಂದ್ಯದಲ್ಲಿ ರಬಾಡ ಅವರು ರೋಹಿತ್​ ಶರ್ಮ ವಿಕೆಟ್​ ಕೀಳುವ ಮೂಲಕ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ರಬಾಡ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲ್ಯಾಂಡ್​ ತಂಡದ ಹಿರಿಯ ಬೌಲರ್​ ಟಿಮ್ ಸೌಥಿ ಹೆಸರಿನಲ್ಲಿತ್ತು. ಇದೀಗ ಅವರ ದಾಖಲೆ ಪತನಗೊಂಡಿದೆ.

ಟಿಮ್ ಸೌಥಿ ಒಟ್ಟು ರೋಹಿತ್ ಶರ್ಮಾ ಅವರನ್ನು 12 ಬಾರಿ ಔಟ್ ಮಾಡಿದ್ದರು. ರಬಾಡ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್​ ಮಾಡುವ ಮೂಲಕ ಒಟ್ಟು 13 ಬಾರಿ ಔಟ್ ಮಾಡಿದ ದಾಖಲೆಎ ಬರೆದಿದ್ದಾರೆ.

ಕಿಂಗ್​ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆ ಇಂಗ್ಲೆಂಡ್​ ತಂಡ ಅನುಭವಿ ಹಾಗೂ ಹಿರಿಯ ಬೌಲರ್​ ಜೇಮ್ಸ್ ಅ್ಯಂಡರ್ಸನ್, ಮೊಯೀನ್ ಅಲಿ ಹಾಗೂ ಟಿಮ್ ಸೌಥಿ ಹೆಸರಿನಲ್ಲಿದೆ. ಈ ಮೂವರು ಬೌಲರ್​ಗಳು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯನ್ನು 10 ಬಾರಿ ಔಟ್ ಮಾಡಿ ಜಂಟಿ ದಾಖಲೆ ಹೊಂದಿದ್ದಾರೆ. ಮುಂದಿನ ಸರಣಿಯಲ್ಲಿ ಈ ಮೂವರಲ್ಲಿ ಯಾರೇ ಕೊಹ್ಲಿಯ ವಿಕೆಟ್​ ಕಿತ್ತರು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.

Exit mobile version