ನವದೆಹಲಿ: ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್(Suhas Lalinakere Yathiraj) ಅವರು ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್‌ನಲ್ಲಿ(Spanish Para-Badminton) ಕಂಚಿನ ಪದಕ ಗೆದ್ದು ಮಂಗಳವಾರ (ಫೆ.28) ಬೆಳಗ್ಗೆ ಸ್ವದೇಶಕ್ಕೆ ಮರಳಿದ್ದಾರೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಹಾಸನ ಮೂಲದ ಐಎಎಸ್ ಅಧಿಕಾರಿಯಾಗಿದ್ದಾರೆ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಅವರು ಮಂಗಳವಾರ(ಫೆ.28) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಇದೇ ವೇಳೆ ಮಾತನಾಡಿದ ಸುಹಾಸ್, “ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ. ಅದರಲ್ಲೂ ದೇಶಕ್ಕಾಗಿ ಪದಕ ಗೆಲ್ಲುವುದು ತುಂಬಾ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿರುತ್ತದೆ. ಯಾವಾಗಲೂ ಅತ್ಯುತ್ತಮ ಆಟ ಪ್ರದರ್ಶನಕ್ಕೆ ಪ್ರಯತ್ನ ನಡೆಸುತ್ತಿರುತ್ತೇನೆ” ಎಂದು ಹೇಳಿದರು.
ಎಸ್‌ಎಲ್4 ಬ್ಯಾಡ್ಮಿಂಟನ್ ವಿಭಾಗದಲ್ಲಿ ಕರ್ನಾಟಕ ಮೂಲದ ಸುಹಾಸ್ ಯತಿರಾಜ್ ಅವರು ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ 20km Race Walk: ಚಿನ್ನ ಗೆದ್ದ ಪ್ರಿಯಾಂಕಾ, ಅಕ್ಷದೀಪ್‌ಗೆ ಒಲಿಂಪಿಕ್ಸ್ ಟಿಕೆಟ್
2007ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್, ದುರ್ಬಲ ಕಾಲನ್ನು ಹೊಂದಿದ್ದಾರೆ. ಕಾಲಿನಲ್ಲಿ ತೀವ್ರ ಬಲಹೀನತೆಯಿದ್ದರೆ ಅಂತಹವರನ್ನು ಎಸ್‌ಎಲ್4 ವಿಭಾಗಕ್ಕೆ ಸೇರಿಸಲಾಗುತ್ತದೆ. ಇಂತಹ ಸಮಸ್ಯೆಗಳ ಮಧ್ಯೆಯೂ ಸುಹಾಸ್ ಐಎಎಸ್ ಅಧಿಕಾರಿಯಾಗಿದ್ದಾರೆ.