ತಿರುವನಂತಪುರಂ: ಇಲ್ಲಿನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಮ್ನಲ್ಲಿ ಭಾನುವಾರ (ಜನವರಿ 15ರಂದು) ನಡೆದ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೂರನೇ ಪಂದ್ಯದಲ್ಲಿ ಭಾರತ ತಂಡದ ಅಮೋಘ ಪ್ರದರ್ಶನ ನೀಡಿದೆ. 317 ರನ್ಗಳ ವಿಶ್ವ ದಾಖಲೆಯ ವಿಜಯವನ್ನೂ ಕಂಡಿದೆ. ವಿರಾಟ್ ಕೊಹ್ಲಿ ಹಾಗೂ ಶುಬ್ಮನ್ ಗಿಲ್ ಶತಕಗಳನ್ನು ಬಾರಿಸಿದ್ದರೆ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಇವೆಲ್ಲದರ ನಡುವೆ ಈ ಪಂದ್ಯವನ್ನೂ ವೀಕ್ಷಿಸಲು ಕೇವಲ 17 ಸಾವಿರ ಮಂದಿ ಪ್ರೇಕ್ಷಕರು ಬಂದಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರೇಕ್ಷಕರು ಸ್ಟೇಡಿಯಮ್ಗೆ ಬರದೇ ಹೋಗಲು ಕೇರಳದ ಕ್ರೀಡಾ ಸಚಿವರೇ ಕಾರಣ ಎಂದು ಆರೋಪಿಸಲಾಗಿದೆ.
ಗ್ರೀನ್ಫೀಲ್ಡ್ ಸ್ಟೇಡಿಯಮ್ನ ಪ್ರೇಕ್ಷಕರ ಗ್ಯಾಲರಿಯ ಸಾಮರ್ಥ್ಯ 38 ಸಾವಿರ. ಆದರೆ, ಭಾನುವಾರ ವಾರಾಂತ್ಯವಾಗಿದ್ದರೂ ಕೇವಲ 17 ಸಾವಿರ ಟಿಕೆಟ್ಗಳು ಮಾರಾಟವಾಗಿದ್ದವು. ಪಂದ್ಯ ನಡೆಯುವ ವೇಳೆಯೂ ಪ್ರೇಕ್ಷಕರ ಗ್ಯಾಲರಿ ಬಣಗುಟ್ಟಿತ್ತು. ಈ ಬಗ್ಗೆ ಭಾರತೀಯ ಕ್ರಿಕೆಟ್ ಕಾರಿಡಾರ್ನಲ್ಲಿ ಚರ್ಚೆಗಳು ನಡೆಯುತ್ತಿವೆ.
ಈ ಪಂದ್ಯಕ್ಕೆ ಮೊದಲು ಟಿಕೆಟ್ ದರ ಹೆಚ್ಚಾಯಿತು ಎಂಬುವ ಜನಾಭಿಪ್ರಾಯ ಸೃಷ್ಟಿಯಾಗಿತ್ತು. ಕನಿಷ್ಠ 1000 ರೂಪಾಯಿ ನಿಗದಿ ಮಾಡಿರುವ ಕುರಿತು ಟೀಕೆಗಳು ವ್ಯಕ್ತಗೊಂಡಿದ್ದವು. ಈ ಬಗ್ಗೆ ಕೇರಳದ ಕ್ರೀಡಾ ಸಚಿವ ಅಬ್ದುರ್ರಹಮಾನ್ ಅವರಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ, ಯಾರಿಗೆಲ್ಲ ಪಂದ್ಯ ನೋಡುವ ಆರ್ಥಿಕ ಸಾಮರ್ಥ್ಯ ಇದೆಯೊ ಅವರು ಮಾತ್ರ ನೋಡಲಿ. ಉಳಿದವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸಚಿವರ ಹೇಳಿಕೆಯನ್ನು ವಿರೋಧಿಸಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯವನ್ನು ಬಹಿಷ್ಕರಿಸುವ ಅಭಿಯಾನ ನಡೆದಿತ್ತು. ಇದುವೇ ಪ್ರೇಕ್ಷಕರ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ದೂರಲಾಗುತ್ತಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇರಳದ ಸಚಿವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲ ಅವರೇ ಕಾರಣ ಎಂಬುದಾಗಿ ಹೇಳಿದ್ದಾರೆ. ಜತೆಗೆ ಅವರು ಕ್ರೀಡೆಯನ್ನು ಬಹಿಷ್ಕರಿಸುವುದು ಸರಿಯಲ್ಲ ಎಂಬುದಾಗಿ ನುಡಿದಿದ್ದಾರೆ. ಅಭಿಮಾನಿಗಳು ಸಚಿವರನ್ನು ಬಹಿಷ್ಕರಿಸಬೇಕು. ಕ್ರೀಡಾಪಟುವನ್ನು ಅಲ್ಲ ಎಂಬುದಾಗಿ ತರೂರ್ ಟ್ವೀಟ್ ಮಾಡಿದ್ದಾರೆ.
ಕೇರಳದ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ಮುಖ್ಯಸ್ಥ ಕೃಷ್ಣ ಪ್ರಸಾದ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಇದೇ ಸ್ಟೇಡಿಯಮ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯ ನಡೆದಾಗ ಟಿಕೆಟ್ಗಳು ಸೋಲ್ಡ್ ಔಟ್ ಆಗಿತ್ತು. ಇಂಥ ಬೆಳವಣಿಗೆ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.
ಇವೆಲ್ಲದರ ನಡುವೆ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಏಕ ದಿನ ಕ್ರಿಕೆಟ್ ಮಾದರಿಯ ಸಾಯುತ್ತಿದೆಯೇ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಕೊಹ್ಲಿ, ಶುಬ್ಮನ್ ಉತ್ತಮವಾಗಿ ಆಡಿದ್ದಾರೆ. ಆದರೆ, ಅರ್ಧಕರ್ಧ ಸ್ಟೇಡಿಯಮ್ ಖಾಲಿಯಾಗೇ ಉಳಿದಿದ್ದು ಆತಂಕದ ಸಂಗತಿ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Team India | ತಮ್ಮ ಶತಕದ ಸಾಧನೆಯ ಹಿಂದೆ ಕುಮಟಾದ ಪ್ರತಿಭೆಯ ಪಾತ್ರವಿದೆ ಎಂದ ವಿರಾಟ್ ಕೊಹ್ಲಿ; ಯಾರು ಅವರು?