ಚೆನ್ನೈ : ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ನೇತೃತ್ವದಲ್ಲಿ ಭಾರತ ತಂಡ (Indian Cricket Team) ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ ಎಂಬ ಟೀಕೆಗಳು ನಿರಂತರವಾಗಿ ಕೇಳಿ ಬರುತ್ತಿವೆ. ವಿರಾಟ್ ಕೊಹ್ಲಿ ವಿಶ್ವ ಕಪ್ ಗೆಲ್ಲಲು ಸಾಧ್ಯವಾಗದೇ ನಾಯಕತ್ವಕ್ಕೆ ವಿದಾಯವನ್ನೂ ಹೇಳಿದ್ದಾರೆ. ಇದೀಗ ರೋಹಿತ್ ಶರ್ಮ ಸರದಿ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಹೊರಬಿದ್ದಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಭಾರತದ ಅತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿದೆ. ಹೀಗಾಗಿ ರೋಹಿತ್ ನಾಯಕತ್ವ ಮತ್ತೊಮ್ಮೆ ಪರೀಕ್ಷಗೆ ಒಳಪಡಲಿದೆ. ಈ ವಿಷಯದ ಕುರಿತು ಮಾತನಾಡಿದ ಆರ್. ಅಶ್ವಿನ್, ವಿಶ್ವ ಕಪ್ ಗೆಲ್ಲದಿರುವುದಕ್ಕೆ ನಾಯಕರನ್ನು ತೆಗಳುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.
ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ವರ್ಷಗಳನ್ನು ಕಾಯಬೇಕಾಗುತ್ತದೆ. ಹಲವು ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ. 1983ರಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದ ನಂತರದ ವಿಶ್ವ ಕಪ್ ಗೆದ್ದಿರುವುದು 2007ರಲ್ಲಿ ಟಿ20 ವಿಶ್ವ ಕಪ್. ಇದೊಂದು ಸುದೀರ್ಘ ಹೋರಾಟದ ಫಲ ಎಂದು ಅಶ್ವಿನ್ ತಮ್ಮ ಯೂಟ್ಯೂಚ್ ಚಾನೆಲ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ | R Ashwin | ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರ ಟೆಸ್ಟ್ ಬೌಲಿಂಗ್ ಸಾಧನೆ ಈ ರೀತಿ ಇದೆ
ಸಚಿನ್ ತೆಂಡೂಲ್ಕರ್ ಅವರು 1992, 1996, 1999, 2003 ಹಾಗೂ 2007ರ ಏಕ ದಿನ ವಿಶ್ವ ಕಪ್ನಲ್ಲಿ ಆಡಿ ವಿಶ್ವ ಕಪ್ ಗೆದ್ದಿರಲಿಲ್ಲ. ಆದರೆ, 2011ರಲ್ಲಿ ಧೋನಿ ನಾಯಕತ್ವದಡಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದರು. ಹಾಗೆಂದು ಎಲ್ಲರಿಗೂ ಬಂದ ತಕ್ಷಣವೇ ಟ್ರೋಫಿ ಸಿಗುವುದಿಲ್ಲ. ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ಅದು ಸಾಧ್ಯವಾಯಿತು ಎಂಬುದಾಗಿ ಅಶ್ವಿನ್ ನುಡಿದಿದ್ದಾರೆ.