Site icon Vistara News

Ravindra Jadeja : ಸ್ಪಿನ್​ ಪಿಚ್ ವಿವಾದ ಮಾಡಿದವರಿಗೆ ತಿರುಗೇಟು ಕೊಟ್ಟ ಸ್ಪಿನ್ನರ್​ ರವೀಂದ್ರ ಜಡೇಜಾ

Ravindra Jadeja

ನವ ದೆಹಲಿ: ಭಾರತದಲ್ಲಿ ಸ್ಪಿನ್ ಪಿಚ್​ಗಳನ್ನು ತಯಾರಿಸುವ ಮೂಲಕ ವಿದೇಶದಿಂದ ಪ್ರವಾಸ ಬರುವ ತಂಡಗಳಿಗೆ ನಕಾರಾತ್ಮಕ ತಂತ್ರದ ಮೂಲಕ ಸೆಡ್ಡು ಹೊಡೆಯಲಾಗುತ್ತದೆ ಎಂಬ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರ ಆರೋಪಕ್ಕೆ ಸ್ಪಿನ್ನರ್​ ರವೀಂದ್ರ ಜಡೇಜಾ (Ravindra Jadeja) ತಕ್ಕ ಉತ್ತರ ಕೊಟ್ಟಿದ್ದಾರೆ. ಇದು ಸುಳ್ಳಿನಿಂದ ಆವರಿಸಿರುವ ಕಲ್ಪನೆ ಎಲ್ಲ ದೇಶಗಳೂ ತಮ್ಮ ತಂಡದ ಆಟಗಾರರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಪಿಚ್​ ರೆಡಿ ಮಾಡುವುದು ಹೊಸತಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ಆಸ್ಟ್ರೇಲಿಯಾ ತಂಡದ ಆಟಗಾರರು ತಾವು ಪ್ರಯಾಣ ಮಾಡುವ ವಿಮಾನದಲ್ಲಿ ಬಿರುಕು ಇದೆ ಎಂಬುದಾಗಿಯೂ ಆರೋಪ ಮಾಡಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಪಂದ್ಯ ಸಾಗಿದ ರೀತಿಯನ್ನು ಗಮನಿಸಿದರೆ ಚೆಂಡು ಹೆಚ್ಚು ತಿರುವು ಪಡೆದುಕೊಂಡ ಕಾರಣ ವಿಕೆಟ್​ ಬಿದ್ದಿಲ್ಲ. ಎಲ್​ಬಿಡಬ್ಲ್ಯು ವಿಕೆಟ್​ಗಳೇ ಹೆಚ್ಚು ಸಿಕ್ಕಿದ್ದವು. ಬಹುತೇಕ ಎಸೆತಗಳು ನೇರ ಗತಿಯಲ್ಲಿ ಸಾಗಿದ್ದವು. ಅದರೂ ತಿರುವು ಹೆಚ್ಚು ಪಡೆಯುತ್ತಿದ್ದ ಪಿಚ್​ ಎಂದು ಹೇಳಲು ಹೇಗೆ ಸಾಧ್ಯ ಎಂದು ಜಡೇಜಾ ಪ್ರಶ್ನಿಸಿದ್ದಾರೆ.

ಭಾರತ ತಂಡದ ವಿದೇಶಗಳಿಗೆ ಕ್ರಿಕೆಟ್​ ಆಡಲು ಹೋಗುವಾಗ ಅಲ್ಲಿನ ಪಿಚ್​ಗಳ ಬಗ್ಗೆ ಯಾವತ್ತೂ ಕಾಮೆಂಟ್​ ಮಾಡಿಲ್ಲ. ಆಸ್ಟ್ರೇಲಿಯಾಗೆ ಪ್ರವಾಸ ಹೋಗಿದ್ದರೆ ಅಲ್ಲಿ 18ರಿಂದ 20 ಎಮ್​ಎಮ್​ ಹುಲ್ಲು ಪಿಚ್​ನ ಮೇಲಿರುತ್ತದೆ. ಅದನ್ನೇ ನಾವು ದೊಡ್ಡ ಸಂಗತಿಯನ್ನಾಗಿ ಮಾಡಿಲ್ಲ. ಅವರೂ ಭಾರತಕ್ಕೆ ಬರುವಾಗ ಪಿಚ್​ ಬಗ್ಗೆ ಯಾವುದೇ ಮಾತನ್ನು ಆಡಬಾರದು ಎಂದು ಜಡೇಜಾ ಹೇಳಿದ್ದಾರೆ.

ಇದನ್ನೂ ಓದಿ : R Ashwin : ರವೀಂದ್ರ ಜಡೇಜಾನಂಥ ಜತೆಗಾರ ಸಿಕ್ಕಿದ್ದಕ್ಕೆ ಧನ್ಯ ಎಂದ ಅಶ್ವಿನ್​; ಅವರು ಈ ಮಾತು ಹೇಳಿದ್ದು ಯಾಕೆ?

ಭಾರತದಲ್ಲಿ ಸ್ಪಿನ್​ ಬೌಲರ್​ಗಳು ಹೆಚ್ಚು ಇದ್ದಾರೆ ಎಂಬ ಕಾರಣಕ್ಕೆ ಸ್ಪಿನ್​ ಪಿಚ್​ ಇಡಲಾಗಿದೆ ಎಂಬುದೂ ತಪ್ಪು. ಭಾರತದಲ್ಲೂ ಸಮರ್ಥ ವೇಗದ ಬೌಲರ್​ಗಳು ಇದ್ದಾರೆ. ಆದರೆ, ಇಲ್ಲಿನ ವಾತಾವರಣಕ್ಕೆ ಈ ಪಿಚ್​ಗಳೇ ಸೂಕ್ತವಾಗುತ್ತವೆ ಎಂದು ಜಡೇಜಾ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

Exit mobile version