Site icon Vistara News

Asia Cup 2023 : ಪಾಕ್​ ಪ್ರವಾಸವನ್ನು ಬಿಸಿಸಿಐ ನಿರ್ಧರಿಸುತ್ತದೆ ಎಂದ ಕ್ರೀಡಾ ಸಚಿವ ಅನುರಾಗ್ ಠಾಕೂರ್​

Sports Minister Anurag Thakur said that BCCI will decide the Pakistan tour

ಮುಂಬಯಿ: ಮುಂಬರುವ ಏಷ್ಯಾ ಕಪ್ (Asia Cup 2023)​ ಬಗ್ಗೆ ಕ್ರಿಕೆಟ್​ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ ಪಾಕಿಸ್ತಾನಕ್ಕೆ ಈ ಟೂರ್ನಿಯ ಆತಿಥ್ಯ ದೊರಕಿರುವುದೇ ಅದಕ್ಕೆ ಕಾರಣ. ಪಾಕಿಸ್ತಾನ ನೆಲದಲ್ಲಿ ಹೋಗಿ ಆಡುವುದು ನಮ್ಮ ಆಟಗಾರರಿಗೆ ಸುರಕ್ಷಿತವಲ್ಲ. ಹೀಗಾಗಿ ತಟಸ್ಥ ತಾಣದಲ್ಲಿ ಟೂರ್ನಿಯನ್ನು ಆಯೋಜಿಸಬೇಕು ಎಂಬುದಾಗಿ ಬಿಸಿಸಿಐ ಅಭಿಪ್ರಾಯಪಟ್ಟಿದೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅದನ್ನು ಒಪ್ಪುತ್ತಿಲ್ಲ. ನಮ್ಮ ಆತಿಥ್ಯದಲ್ಲಿ ನಡೆಯವುದಾದರೆ ನಮ್ಮ ನೆಲದಲ್ಲೇ ನಡೆಯಬೇಕು ಎಂದು ಹೇಳುತ್ತಿದೆ. ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಸಭೆಯಲ್ಲಿ ಇದು ಅಂತಿಮವಾಗಿ ನಿರ್ಣಯವಾಗಬಹುದು.

ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಸಾಧ್ಯವೇ ಇಲ್ಲ. ಕೇಂದ್ರ ಗೃಹ ಸಚಿವಾಲಯದಿಂದ ಅದಕ್ಕೆ ಅನುಮತಿ ಸಿಗದು ಎಂಬುದಾಗಿ ಬಿಸಿಸಿಐ ಈ ಹಿಂದೆ ಹೇಳಿತ್ತು. ಬಿಸಿಸಿ ಕಾರ್ಯದರ್ಶಿ ಜಯ್​ ಶಾ ಅವರು ಮಾತನಾಡಿ, ಪಾಕಿಸ್ತಾನಕ್ಕೆ ಪ್ರವಾಸ ಮಾಡುವ ವಿಚಾರ ಬಿಸಿಸಿಐ ಕೈಯಲ್ಲಿದೆ ಎಂದು ಹೇಳಿತ್ತು. ಆದರೆ, ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್​ ಠಾಕೂರ್​ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನಕ್ಕೆ ಹೋಗುವುದನ್ನು ಬಿಸಿಸಿಐ ನಿರ್ಧಾರ ಮಾಡಲಿದೆ ಎಂಬುದಾಗಿಅ ವರು ಹೇಳಿದ್ದಾರೆ.

ಇದನ್ನೂ ಓದಿ : Asia Cup 2023 : ಏಷ್ಯಾ ಕಪ್​ ಕ್ರಿಕೆಟ್​ ಪಾಕಿಸ್ತಾನದಲ್ಲಿ ನಡೆಯದಂತೆ ನೋಡಿಕೊಂಡ ಜಯ್​ ಶಾ!

ನಾಗ್ಪುರಕ್ಕೆ ಭೇಟಿ ನೀದ್ದ ಅನುರಾಗ್ ಠಾಕೂರ್ ಅವರು ಕೇಂದ್ರ ಕ್ರೀಡಾ ಸಚಿವಾಲಯದ ನಾನಾ ಯೋಜನೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದರು. ಈ ವೇಳೆ ಸೆಪ್ಟೆಂಬರ್​ನಲ್ಲಿ ನಡೆಯುವ ಏಷ್ಯಾ ಕಪ್​ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದೆಯೇ ಎಂಬುದಾಗಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅನುರಾಗ್​ ಠಾಕೂರ್​, ಮೊದಲು ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಲಿ. ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜಯ್​ ಶಾ ಭೇಟಿಗೆ ಮುಂದಾಗಿದ್ದಾರೆ ಪಿಸಿಬಿ ಅಧ್ಯಕ್ಷ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಅವರು ಏಷ್ಯಾ ಕಪ್(Asia Cup) 2023ರ ಕುರಿತು ಎಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಆತಿಥ್ಯ ವಹಿಸಲಿರುವ 2023ರ ಆವೃತ್ತಿಯ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ನಡೆಸುವಂತೆ ನಜೀಮ್​ ಸೇಥಿ ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮೊದಲು ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಕಳೆದ ವರ್ಷ ಜಯ್ ಶಾ ಹೇಳಿದ್ದರು. ಇದೇ ವಿಚಾರವಾಗಿ ಚರ್ಚೆ ನಡೆಸಲು ಸೇಥಿ ಅವರು ಜಯ್​ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇಂಟರ್​ನ್ಯಾಷನಲ್​ ಟಿ20 ಲೀಗ್ ಉದ್ಘಾಟನಾ ಸಮಾರಂಭಕ್ಕಾಗಿ ದುಬೈಗೆ ಬಂದ ವೇಳೆ ನಜೀಮ್​ ಸೇಥಿ ಎಸಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಅವರು ಏಷ್ಯಾ ಕಪ್ 2023ರ ಚರ್ಚೆಗಾಗಿ ಫೆಬ್ರವರಿಯಲ್ಲಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಅವರು, ಭಾರತ ತಂಡವು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ ಅಥವಾ ಆತಿಥ್ಯದ ಹಕ್ಕನ್ನು ಹಿಂತೆಗೆದುಕೊಂಡರೆ ಪಾಕಿಸ್ತಾನ ತಂಡವು ವಿಶ್ವಕಪ್ 2023ರಿಂದ ಹಿಂದೆ ಸರಿಯುವುದನ್ನು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ನೂತನ ಅಧ್ಯಕ್ಷರಾಗಿರುವ ಸೇಥಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಸಭೆಗೆ ಜಯ್​ ಶಾ ಹೋಗಲಿದ್ದಾರಾ ಎಂಬುವುದನ್ನು ಕಾದು ನೋಡಬೇಕಿದೆ.

Exit mobile version