Site icon Vistara News

Team India | ಭಾರತ ತಂಡ ಪಾಕ್‌ಗೆ ಹೋಗುವ ವಿಚಾರ ಗೃಹ ಇಲಾಖೆ ನಿರ್ಧಾರಕ್ಕೆ ಬಿಟ್ಟಿದ್ದು ಎಂದ ಕ್ರೀಡಾ ಸಚಿವ

Anurag Minister Digital Media

ಹೊಸದಿಲ್ಲಿ : ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರು ಏಷ್ಯಾ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆ ದೇಶಕ್ಕೆ ತೆರಳಬೇಕೊ, ಇಲ್ಲವೊ ಎಂಬ ವಿಚಾರವನ್ನು ಗೃಹ ಇಲಾಖೆ ನಿರ್ಧರಿಸುತ್ತದೆ ಎಂದು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಇದೇ ವೇಳೆ ಅವರು ಪಾಕಿಸ್ತಾನ ತಂಡ ಭಾರತಕ್ಕೆ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಬರಬಹುದು. ಅವರಿಗೆ ಸ್ವಾಗತ ಎಂದು ಹೇಳಿದೆ.

ಕಳೆದ ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಭಾರತ ತಂಡ ಏಷ್ಯಾ ಕಪ್‌ನಲ್ಲಿ ಪಾಳ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಟೂರ್ನಿಯೇ ತಟಸ್ಥ ತಾಣದಲ್ಲಿ ನಡೆಯಲಿದೆ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಹಾಗಾದರೆ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪಾಕಿಸ್ತಾನವೂ ಹೋಗುವುದಿಲ್ಲ ಎಂದು ಹೇಳಿತ್ತು.

ಗುರುವಾರ ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುರಾಗ್‌ ಠಾಕೂರ್‌ “ವಿಶ್ವ ಕಪ್‌ಗೆ ಅರ್ಹತೆ ಪಡೆದಿರುವ ಎಲ್ಲ ತಂಡಗಳು ಭಾರತಕ್ಕೆ ಬಂದು ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳಬಹುದು. ನಾವು ಎಲ್ಲರಿಗೂ ಆಡಲು ಬರುವಂತೆ ಆಹ್ವಾನ ಕೊಡುತ್ತೇವೆ. ಪಾಕಿಸ್ತಾನವೂ ಬಂದು ಆಡುತ್ತದೆ ಎಂಬುದು ನಮ್ಮ ನಿರೀಕ್ಷೆ,” ಎಂಬುದಾಗಿ ಅವರು ಹೇಳಿದ್ದಾರೆ.

ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಕೊರೊನಾ ಬರುತ್ತದೆ ಎಂದು ಯಾರಾದರೂ ಅಂದುಕೊಂಡಿರಲಿಲ್ಲ. ಅದು ಬಂದಿದೆ. ಅಂತೆಯೇ ಭಾರತ ತಂಡವೂ ಹೋಗಬಹುದು. ಆದರೆ, ಸಾಧ್ಯತೆಗಳು ಕಡಿಮೆ ಎಂಬುದಾಗಿ ಅವರು ಇದೇ ವೇಳೆ ನುಡಿದಿದ್ದಾರೆ.

ಈ ನಿರ್ಧಾರವನ್ನು ಭಾರತ ಗೃಹ ಇಲಾಖೆ ನಿರ್ಧರಿಸಲಿದೆ. ನಮ್ಮ ತಂಡದ ಆಟಗಾರರ ಸುರಕ್ಷತೆ ಹಾಗೂ ಭದ್ರತೆಯೇ ಅದ್ಯತೆಯ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Ramiz Raja | ಭಾರತದ ಜತೆ ಕ್ರಿಕೆಟ್​ ಆಡದಿದ್ದರೆ ಪಾಕ್ ಕ್ರಿಕೆಟ್​ ಮಂಡಳಿ ಕುಸಿತ ಗ್ಯಾರಂಟಿ: ರಮೀಜ್​ ರಾಜಾ

Exit mobile version