ಹೈದರಾಬಾದ್: ಲಕ್ನೋ ಸೂಪರ್ ಜೈಂಟ್ಸ್(SRH vs LSG) ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್(Travis Head), ತಮ್ಮ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಬೌಲರ್ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ಕೇವಲ 19 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಈ ಮೂಲಕ ಪವರ್ ಪ್ಲೇಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ 2ನೇ ಆಟಗಾರ ಎನಿಸಿಕೊಂಡರು. ದಾಖಲೆ ಡೇವಿಡ್ ವಾರ್ನರ್(6) ಹೆಸರಿನಲ್ಲಿದೆ. ಹೆಡ್ 4 ಬಾರಿ ಈ ಸಾಧನೆ ಮಾಡಿದರು. ಇದು ಮಾತ್ರವಲ್ಲದೆ, ಈ ಈ ಆವೃತ್ತಿಯಲ್ಲಿ ಹೆಡ್ 16 ಎಸೆತಗಳಿಂದ ಬಾರಿಸಿದ ಮೂರನೇ ಅರ್ಧಶತ ಇದಾಗಿದೆ.
ಪವರ್ ಪ್ಲೇಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಬ್ಯಾಟರ್ಗಳು
ಡೇವಿಡ್ ವಾರ್ನರ್-6
ಟ್ರಾವಿಸ್ ಹೆಡ್-4
ಸುನೀಲ್ ನರೈನ್-3
ಕ್ರಿಸ್ ಗೇಲ್-3
ಒಟ್ಟು 30 ಎಸೆತ ಎದುರಿಸಿದ ಹೆಡ್ 8 ಸೊಗಸಾದ ಸಿಕ್ಸರ್ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 89 ರನ್ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಇವರ ಜತೆಗಾರ ಅಭಿಷೇಕ್ ಶರ್ಮ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 75 ರನ್ ಬಾರಿಸಿದರು. ಈ ಜೋಡಿಯ ಬ್ಯಾಟಿಂಗ್ ಆರ್ಭಟದಿಂದಾಗಿ ಪವರ್ ಪ್ಲೇ ಮುಕ್ತಾಯಕ್ಕೆ ತಂಡಕ್ಕೆ ವಿಕೆಟ್ ನಷ್ಟವಿಲ್ಲದೆ 107 ರನ್ ಹರಿದು ಬಂತು. ಸದ್ಯ ಹೈದರಾಬಾದ್ ಈ ಗೆಲುವಿನೊಂದಿಗೆ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನಿಯಾಗಿದ್ದ ಚೆನ್ನೈ 4ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್ ಹೀನಾಯ ಸೋಲು
ಈ ಪಂದ್ಯದಲ್ಲಿ ಟಾಸ್ ಗೆದ್ದು ಆಮೆ ಗತಿಯ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 165 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 9.4 ಓವರ್ಗಳಲ್ಲಿ 167 ರನ್ ಬಾರಿಸಿ ಭರ್ಜರಿ 10 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡ ಪವರ್ ಪ್ಲೇಯಲ್ಲಿ ವೈಫಲ್ಯ ಕಂಡು 2 ವಿಕೆಟ್ಗೆ ಕೇವಲ 27 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್ ಬದೋನಿ ಮತ್ತು ನಿಕೋಲಸ್ ಪೂರನ್. ಉಭಯ ಆಟಗಾರರು ಹೈದರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್ಗೆ ಮುರಿಯದ 99 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು. ಬದೋನಿ 30 ಎಸೆತ ಎದುರಿಸಿ 55 ರನ್ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ನಿಕೋಲಸ್ ಪೂರನ್ 26 ಎಸೆತಗಳಿಂದ 48 ರನ್ ಗಳಿಸಿದರು. ಹೈದರಾಬಾದ್ ಪರ ಅನುಭವಿ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ, ಕಮಿನ್ಸ್ 1 ವಿಕೆಟ್ ಕಿತ್ತರು.