ಹೈದರಾಬಾದ್: ವಿರಾಟ್ ಕೊಹ್ಲಿ(Virat Kohli) ಅವರು ಶನಿವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ(IPL 2024) ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಆದರೆ ಈ ದಾಖಲೆ ಒಂದು ದಿನ ಕಳೆಯುವ ಮುನ್ನವೇ ಪತನಗೊಂಡಿದೆ. ಸನ್ರೈಸರ್ಸ್ ಹೈದರಾಬಾದ್(SRH vs PBKS) ತಂಡದ ಯುವ ಆಟಗಾರ ಅಭಿಷೇಕ್ ಶರ್ಮ(Abhishek Sharma) ಈ ದಾಖಲೆಯನ್ನು ಮರಿದಿದ್ದಾರೆ.
ಇಂದು(ಭಾನುವಾರ) ನಡೆದ ಐಪಿಎಲ್ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪ್ರಚಂಡ ಬ್ಯಾಟಿಂಗ್ ಮೂಲಕ ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸಿದ ಅಭಿಷೇಕ್ ಬರೋಬ್ಬರಿ 6 ಸಿಕ್ಸರ್ ಬಾರಿಸಿ ಮಿಂಚಿದರು. ಇದೇ ವೇಳೆ ಈ ಬಾರಿ ಅತ್ಯಧಿಕ ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ(37) ಅವರ ದಾಖಲೆಯನ್ನು ಹಿಂದಿಕ್ಕಿದರು. ಸದ್ಯ ಅಭಿಷೇಕ್ 41* ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ. ಆರ್ಸಿಬಿ ಕೂಡ ಪ್ಲೇ ಆಫ್ ಪ್ರವೇಶಿಸಿದ ಕಾರಣ ಕೊಹ್ಲಿಗೆ ಈ ದಾಖಲೆಯನ್ನು ಮುರಿಯುವ ಅವಕಾಶ ಇನ್ನೂ ಜೀವಂತವಿದೆ. ಒಟ್ಟಾರೆಯಾಗಿ ಉಭಯ ಆಟಗಾರರ ಮಧ್ಯೆ ಸಿಕ್ಸರ್ ಪೈಪೋಟಿ ಏರ್ಪಟ್ಟಿದೆ.
ಈ ಬಾರಿ ಅತ್ಯಧಿಕ ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರು
ಅಭಿಷೇಕ್ ಶರ್ಮ-41 ಸಿಕ್ಸರ್
ವಿರಾಟ್ ಕೊಹ್ಲಿ-37 ಸಿಕ್ಸರ್
ನಿಕೋಲಸ್ ಪೂರನ್-36 ಸಿಕ್ಸರ್
ಹೆನ್ರಿಚ್ ಕ್ಲಾಸೆನ್-33 ಸಿಕ್ಸರ್
ಸುನೀಲ್ ನರೈನ್-32 ಸಿಕ್ಸರ್
ಇದನ್ನೂ ಓದಿ PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್; ಹೈದರಾಬಾದ್ಗೆ 4 ವಿಕೆಟ್ ಜಯ
ಪಂಜಾಬ್ ವಿರುದ್ಧದ ಪಂದ್ಯದಲ್ಲಿ 21 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಅಭಿಷೇಕ್ ಒಟ್ಟು 28 ಎಸೆತಗಳಿಂದ 66 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ 5 ವಿಕೆಟ್ಗೆ 214 ರನ್ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆದರೆ ಈ ಮೊತ್ತ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 215 ಬಾರಿಸಿ ತವರಿನಲ್ಲಿ ವಿಜಯ ಪತಾಕೆ ಹಾರಿಸಿತು. ಉಭಯ ತಂಡಗಳ ಜಿದ್ದಾಜಿದ್ದಿನ ಬ್ಯಾಟಿಂಗ್ ಪರಾಕ್ರಮದಿಂದಾಗಿ ಈ ಪಂದ್ಯದಲ್ಲಿ ಒಟ್ಟು 429 ರನ್ ದಾಖಲಾಯಿತು.
ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಹೈದರಾಬಾದ್ ಈ ಗೆಲುವಿನೊಂದಿಗೆ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ್ ತಂಡ ಕೆಕೆಆರ್ ವಿರುದ್ಧ ಗೆದ್ದರೆ ಹೈದರಾಬಾದ್ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಆಡಲಿದೆ. ಎಲಿಮಿನೇಟರ್ ಪಂದ್ಯ ಬುಧವಾರ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.