Site icon Vistara News

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

RCB vs SRH

ಹೈದರಾಬಾದ್​: ಮೊದಲ ಮುಖಾಮುಖಿಯಲ್ಲಿ ಸನ್​ರೈಸರ್ಸ್(RCB vs SRH)​ ವಿರುದ್ಧ ದಾಖಲೆಯ 287 ರನ್​ ಚಚ್ಚಿಸಿಕೊಂಡು ಸೋಲು ಕಂಡಿದ್ದ ಆರ್​ಸಿಬಿ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ, ಸದ್ಯದ ಆರ್​ಸಿಬಿ ಪರಿಸ್ಥಿತಿ ನೋಡುವಾಗ ಇದು ಅಸಾಧ್ಯವೆನ್ನುವಂತೆ ತೋರುತ್ತಿದೆ. ಏಕೆಂದರೆ ಆರ್​ಸಿಬಿ(RCB) ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇದೊಂದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

ಪ್ರತಿ ಐಪಿಎಲ್‌(IPL 2024) ಆರಂಭದ ಸಂದರ್ಭದಲ್ಲಿಯೂ ಆರ್‌ಸಿಬಿ ಒಂದು ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಎಂದು ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ನಮ್ಮದು ಮುದಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ತಲುಪಿದೆ. ಹೊಸ ಅಧ್ಯಾಯ ಅಂತ ಆರ್‌ಸಿಬಿ ಆಟಗಾರರು ಹೇಳಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಆದರೆ, ಇದೀಗ ಆರ್‌ಸಿಬಿ ನಿರಂತರ ಸೋಲು ಅನುಭವಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಇತರ ತಂಡಗಳ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ತವರಿನಲ್ಲೇ ಹೈದರಾಬಾದ್​ ವಿರುದ್ಧ ಸರಿಯಾಗಿ ಚಚ್ಚಿಸಿಕೊಂಡಿದ್ದ ಆರ್​ಸಿಬಿ ಮತ್ತೊಂದು ಪಂದ್ಯ ಆಡುತ್ತದೆ ಎನ್ನುವಾಗಲೇ ಅಭಿಮಾನಿಗಳು ಸೋಲು ಖಚಿತ ಆದರೆ, ಟಾಸ್​ ಗೆದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್​ ನಡೆಸಲಿ ಎಂದು ಹಾರೈಸಿದ್ದಾರೆ. ಏಕೆಂದರೆ ಹೈದರಾಬಾದ್​ ಮೊದಲು ಬ್ಯಾಟಿಂಗ್​ ನಡೆಸಿದೆ 300 ರನ್​ ಬಾರಿಸುವು ನಿಶ್ಚಿತ ಎಂದು ಸ್ವತಃ ಆರ್​ಸಿಬಿ ಅಭಿಮಾನಿಗಳೇ ಹೇಳತೊಡಗಿದ್ದಾರೆ.

ಹೈದರಾಬಾದ್​ ಬಲಿಷ್ಠ


ಈ ಬಾರಿಯ ಐಪಿಎಲ್​ನಲ್ಲಿ ರನ್​ ಮಳೆಯೇ ಹರಿಸುತ್ತಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಇದು ತವರಿನ ಪಂದ್ಯ. ಬಲಿಷ್ಠ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರುವ ಹೈದರಾಬಾದ್​ ಪರ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. 5 ಓವರ್​ನಲ್ಲಿಯೇ 100 ರನ್​ ಬಾರಿಸುವ ಸಾಮರ್ಥ ಇವರಲ್ಲಿದೆ. ಅದರಲ್ಲೂ ಕಳಪೆ ಬೌಲಿಂಗ್​ ಹೊಂದಿರುವ ಆರ್​ಸಿಬಿ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿದರೆ 300 ರನ್​ ಬಾರಿಸುವ ಸಾಮರ್ಥವೂ ತಂಡಕ್ಕಿದೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್,ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಸನ್​ರೈಸರ್ಸ್​ ಹೈದರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್​, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

Exit mobile version