ಜೀಲಾಂಗ್: ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡ ಟಿ20 ವಿಶ್ವ ಕಪ್ (T20 World Cup) ಸೂಪರ್-12 ಹಂತಕ್ಕೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 16 ರನ್ನಿಂದ ಸೋಲಿಸಿ ಸೂಪರ್-12 ಪ್ರವೇಶಿಸಿದೆ.
ಜೀಲಾಂಗ್ನ ಸೈಮಂಡ್ಸ್ ಸ್ಟೇಡಿಯಮ್ನಲ್ಲಿ ನಡೆದ ಈ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 162 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಬಳಗ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 149 ರನ್ ಗಳಿಸಿ ಶರಣಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 36 ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕುಸಾಲ್ ಮೆಂಡಿಸ್ ತಂಡಕ್ಕೆ ಆಸರೆಯಾಗಿ 44 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 79 ರನ್ ಹೊಡೆದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕ 31 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ನೆದರ್ಲೆಂಡ್ಸ್ ಪರ ವೇನ್ ಮೀಕೆರೆನ್ ಮತ್ತು ಬಾಸ್ ಡಿ ಲೀಡೆ ತಲಾ 2 ವಿಕೆಟ್ ಕಿತ್ತು ಮಿಂಚಿದರು.
ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಆರಂಭವೂ ಲಂಕಾ ತಂಡದಂತೆ ಉತ್ತಮವಾಗಿರಲಿಲ್ಲ. 23 ರನ್ಗೆ ತಂಡದ ಮೊದಲ ವಿಕೆಟ್ ಪತನವಾಯಿತು. 7 ರನ್ಗಳಿಸಿದ್ದ ವಿಕ್ರಾಮಾಜಿತ್ ಸಿಂಗ್ ಮಹೀಶ್ ತೀಕ್ಷಣಗೆ ವಿಕೆಟ್ ಒಪ್ಪಿಸಿದರು. ಆದರೆ ಸಿಂಗ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಮ್ಯಾಕ್ಸ್ ಒ’ಡೌಡ್ ಮಾತ್ರ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡಕ್ಕೆ 71 ರನ್ಗಳ ಕೊಡುಗೆ ನೀಡಿದರು. ಅವರ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತು. ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರ ಸ್ಕಾಟ್ ಎಡ್ವರ್ಡ್ 21 ರನ್ ಗಳಿಸಿದರು. ಲಂಕಾ ಪರ ವನಿಂದು ಹಸರಂಗ 3 ಮತ್ತು ಮಹೀಷ್ ತೀಕ್ಷಣ 2 ವಿಕೆಟ್ ಕಿತ್ತು ಘಾತಕವಾಗಿ ಪರಿಣಮಿಸಿದರು.
ಸ್ಕೋರ್ ವಿವರ:
ಶ್ರೀಲಂಕಾ: 20 ಓವರ್ಗಳಲ್ಲಿ 6 ವಿಕೆಟ್ಗೆ 162 (ಕುಸಾಲ್ ಮೆಂಡಿಸ್ 79, ಅಸಲಂಕ 31, ಮೀಕೆರೆನ್ 25ಕ್ಕೆ 2, ಲೀಡೆ 31ಕ್ಕೆ2).
ನೆದರ್ಲೆಂಡ್ಸ್: 20 ಓವರ್ಗಳಲ್ಲಿ 9 ವಿಕೆಟ್ಗೆ 149 (ಮ್ಯಾಕ್ಸ್ ಒ’ಡೌಡ್ ಅಜೇಯ 71, ಎಡ್ವರ್ಡ್ 21, ಹಸರಂಗ 28ಕ್ಕೆ 3, ತೀಕ್ಷಣ 23ಕ್ಕೆ2).
ಪಂದ್ಯಶ್ರೇಷ್ಠ
ಇದನ್ನೂ ಓದಿ | T20 World cup | ರೋವ್ಮನ್ ಪೊವೆಲ್ ಸಿಕ್ಸರ್ ಕಂಡು ಬೆರಗಾದ ಕ್ರಿಕೆಟ್ ಅಭಿಮಾನಿಗಳು