Site icon Vistara News

Asia Cup 2023 : ಪಾಕಿಸ್ತಾನದಲ್ಲಿ ಏಷ್ಯಾ ಕಪ್​ ಬೇಡ ಎಂಬ ಬಿಸಿಸಿಐ ವಾದಕ್ಕೆ ಲಂಕಾ, ಬಾಂಗ್ಲಾ ಬೆಂಬಲ

Asia Cup

ಮುಂಬಯಿ: ಏಷ್ಯಾ ಕಪ್ 2023ಗೆ ಆತಿಥ್ಯ ವಹಿಸುವ ಬಗ್ಗೆ ವಿವಾದವು ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಟೂರ್ನಿಯನ್ನು ಪಾಕಿಸ್ತಾನದಲ್ಲಿ ನಡೆಸಿಯೇ ಸಿದ್ಧ ಎಂದು ಪಿಸಿಬಿ ಹಠ ಹಿಡಿದರೆ, ಅಲ್ಲಿಗಾದರೆ ನಾವು ಬರುವುದಿಲ್ಲ. ತಟಸ್ಥ ತಾಣ ಬೆಸ್ಟ್​ ಎಂದು ಬಿಸಿಸಿಐ ಹೇಳಿದೆ. ಇದಕ್ಕೆ ಪ್ರತಿಯಾಗಿ ಪಿಸಿಬಿ, ಹಾಗಾದರೆ ನಾವು ವಿಶ್ವ ಕಪ್​ನಲ್ಲಿ ಆಡುವುದಕ್ಕೆ ಭಾರತಕ್ಕೆ ಹೋಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಗೊಂದಲಕ್ಕೆ ಬಿದ್ದಿದೆ.

ಹೊಸ ಬೆಳವಣಿಗೆಯಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎರಡೂ ಏಷ್ಯಾ ಕಪ್ ಅನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಲು ಬಿಸಿಸಿಐಗೆ ಬೆಂಬಲ ನೀಡುತ್ತಿವೆ ಎಂದು ವರದಿಯಾಗಿದೆ. ಆತಿಥ್ಯ ಹಕ್ಕುಗಳನ್ನು ಪಾಕಿಸ್ತಾನದಿಂದ ಕಸಿದುಕೊಂಡರೆ ಎರಡೂ ದೇಶಗಳು ಪಂದ್ಯಾವಳಿಯ ಆತಿಥ್ಯ ವಹಿಸಲು ಸಹ ಸಿದ್ಧವಾಗಿವೆ ಎಂದು ವರದಿ ಹೇಳಿದೆ.

ಜಿಯೋ ನ್ಯೂಸ್‘ ವರದಿಯ ಪ್ರಕಾರ, ಪಾಕಿಸ್ತಾನವು ಪಂದ್ಯಾವಳಿಯಲ್ಲಿ ಭಾಗವಹಿಸಲು ನಿರಾಕರಿಸಿದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆತಿಥ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕ್ರಿಕೆಟ್​ ಮಂಡಳಿಗೆ ನೀಡಲು ಮುಂದಾಗಿದೆ.

ಅಂತೆಯೇ ಎಸಿಸಿ ಅಧ್ಯಕ್ಷರಾಗಿರವು ಜಯ್ ಶಾ ಅವರು ಇದರಿಂದ ಆಗುವ ನಷ್ಟವನ್ನು ಭರಿಸಲು ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ. ಪಾಕಿಸ್ತಾನದ ಅನುಪಸ್ಥಿತಿಯಿಂದ ಉಂಟಾಗುವ ನಷ್ಟವನ್ನು ಮುಂದಿನ ದಿನಗಳಲ್ಲಿ ಭಾರತದಲ್ಲಿ ನಡೆಯುವ ಸರಣಿಯೊಂದಿಗೆ ಸರಿದೂಗಿಸಲಾಗುವುದು ಎಂದು ಜಯ್ ಶಾ ಅವರು ಪ್ರಸಾರಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Rishabh Pant: ಏಷ್ಯಾ ಕಪ್​, ಏಕದಿನ ವಿಶ್ವಕಪ್​ ಟೂರ್ನಿಯಿಂದಲೂ ರಿಷಭ್​ ಪಂತ್​ ಔಟ್​!

ಈ ಹಿಂದೆ, ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ ಎಂಬ ವರದಿಗಳು ಬಂದಿದ್ದವು, ಅಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನು ಫೈನಲ್ ಸೇರಿದಂತೆ ತಟಸ್ಥ ಸ್ಥಳದಲ್ಲಿ ಆಡಲಾಗುತ್ತದೆ ಎಂದು ಹೇಳಲಾಗಿತ್ತು. ಉಳಿದ ತಂಡಗಳ ನಡುವಿನ ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯುತ್ತದೆ ಎಂದು ವಿವರಿಸಲಾಗಿತ್ತು. ಆದಾಗ್ಯೂ, ಇತ್ತೀಚಿನ ವರದಿಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಬಿಸಿಸಿಐ ತಿರಸ್ಕರಿಸಿದೆ. ಎಸಿಸಿ ಸಭೆಯಲ್ಲಿ ತನ್ನ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ.

2012-13ರಲ್ಲಿ ಇಂಡೋ- ಪಾಕ್ ಕೊನೇ ಸರಣಿ

ಏಷ್ಯಾ ಕಪ್ 2023ರ ಆತಿಥ್ಯ ಹಕ್ಕುಗಳನ್ನು 2022ರಲ್ಲಿ ಪಾಕಿಸ್ತಾನಕ್ಕೆ ನೀಡಿದಾಗಿನಿಂದ ಉಭಯ ದೇಶಗಳ ಕ್ರಿಕೆಟ್​ ಮಂಡಳಿ ನಡುವೆ ಜಿದ್ದು ಆರಂಭಗೊಂಡಿತ್ತು. ಪಿಸಿಬಿ ಮಾಜಿ ಅಧ್ಯಕ್ಷ ರಮೀಝ್ ರಾಜಾ ಕೂಡ ವಿಶ್ವಕಪ್ ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂಬ ಮಂಡಳಿಯ ಪ್ರಸ್ತುತ ನಿಲುವನ್ನು ಪ್ರಕಟಿಸಿದ್ದರು.

ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ 2012-13ರಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಅಲ್ಲಿಂದ ಏಷ್ಯಾ ಕಪ್ ಅಥವಾ ವಿಶ್ವ ಕಪ್​ನಂಥ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. ಮುಂಬರುವ ತಿಂಗಳುಗಳಲ್ಲಿ, ಎಸಿಸಿಯ ಮತ್ತೊಂದು ಸಭೆಯ ನಂತರ ಏಷ್ಯಾ ಕಪ್ ಕುರಿತ ಗೊಂದಲವು ಕೊನೆಗೊಳ್ಳುವ ನಿರೀಕ್ಷೆಯಿದೆ.

Exit mobile version