Site icon Vistara News

ICC World Cup 2023 : ಶ್ರೀಲಂಕಾ ತಂಡಕ್ಕೆ ಮೊದಲ ಜಯ, ನೆದರ್ಲ್ಯಾಂಡ್ಸ್​ಗೆ 5 ವಿಕೆಟ್​ ಸೋಲು

Sadeera Samarawickrama

ಲಖನೌ: ವಿಶ್ವ ಕಪ್ ಟೂರ್ನಿಯಲ್ಲಿ (ICC World Cup 2023 ) ಶ್ರೀಲಂಕಾ ತಂಡ ಮೊದಲ ಜಯ ದಾಖಲಿಸಿದೆ. ನೆದರ್ಲ್ಯಾಂಡ್ಸ್​ ವಿರುದ್ಧದ ಹಣಾಹಣಿಯಲ್ಲಿ ಐದು ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿ 9ರಲ್ಲಿ ಅವಕಾಶ ಪಡೆದಿದೆ. ನೆದರ್ಲ್ಯಾಂಡ್ಸ್​ ತಂಡ ಸೋಲಿನ ಹೊರತಾಗಿಯೂ ಎಂಟನೇ ಸ್ಥಾನಕ್ಕೆ ಎಂಟ್ರಿಪಡೆದಿದೆ. ಆದರೆ, ಎಂಟರಲ್ಲಿದ್ದ ಅಫಘಾನಿಸ್ತಾನ ತಂಡ 10ನೇ ಸ್ಥಾನಕ್ಕೆ ಕುಸಿದಿದೆ. ಅಜೇಯ 91 ರನ್ ಬಾರಿಸಿದ ಲಂಕಾ ವಿಕೆಟ್​ಕೀಪರ್ ಬ್ಯಾಟರ್​ ಸದೀರಾ ಸಮರವಿಕ್ರಮ ಲಂಕಾ ಗೆಲುವಿನ ರೂವಾರಿ ಎನಿಸಿಕೊಂಡರು.

ಇಲ್ಲಿನ ಭಾರತರತ್ನ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ನೆದರ್ಲ್ಯಾಂಡ್ಸ್​ ತಂಡ ಮೊದಲು ಬ್ಯಾಟ್​ ಮಾಡಿ 49.4 ಓವರ್​ಗಳಲ್ಲಿ 262 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ಬಳಗ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್​ ನಷ್ಟಕ್ಕೆ 263 ರನ್ ಬಾರಿಸಿ ಗೆಲುವು ಕಂಡಿತು.

ಈ ಸುದ್ದಿಗಳನ್ನು ಓದಿ
ICC World Cup 2023 : ಬಾಂಗ್ಲಾ ಹುಲಿಯ ಹೊಟ್ಟೆ ಸೀಳಿದ ಭಾರತೀಯ ಅಭಿಮಾನಿಗಳು; ಎಲ್ಲೆಡೆಯಿಂದ ಟೀಕೆ
‘ತಂಡ ಮೊದಲು, ದಾಖಲೆ ಆ ಮೇಲೆ’ ಕೊಹ್ಲಿಗೆ ಬುದ್ಧಿವಾದ ಹೇಳಿದ ಟೆಸ್ಟ್ ಸ್ಪೆಷಲಿಸ್ಟ್
IND vs NZ: ನ್ಯೂಜಿಲ್ಯಾಂಡ್​ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಬದಲಾವಣೆ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡ 18 ರನ್​ಗೆ ಮೊದಲ ವಿಕೆಟ್ ನಷ್ಟ ಮಾಡಿಕೊಂಡರೆ 52 ರನ್​ಗೆ 2ನೇ ವಿಕೆಟ್​ ಕಳೆದುಕೊಂಡಿತು. ಆದರೆ ಆ ಬಳಿಕ ಕ್ರೀಸ್​ಗೆ ಬಂದ ಸದೀರಾ ಸಮರವಿಕ್ರಮ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 107 ಎಸೆತಗಳನ್ನು ಎದುರಿಸಿದ ಅವರು 7 ಫೋರ್​ಗಳ ಸಮೇತ 91 ರನ್ ಬಾರಿಸಿದರು. ಆರಂಭದಲ್ಲಿ ಅವರಿಗೆ ಚರಿತ್ ಅಸಲಂಕಾ 44 ಬಾರಿಸಿ ಉತ್ತಮ ಸಾಥ್ ಕೊಟ್ಟರು. ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್​ ಪಾಥುಮ್ ನಿಸ್ಸಾಂಕ (52) ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಕೊನೆಯಲ್ಲಿ ಧನಂಜಯ ಡಿಸಿಲ್ವಾ 30 ರನ್ ಬಾರಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ನೆದರ್ಲ್ಯಾಂಡ್ಸ್​ ಪರ ಆರ್ಯನ್​ ದತ್​ 44 ರನ್​ಗಳಿಗೆ 3 ವಿಕೆಟ್​ ಉರುಳಿಸಿದರು.

ಕೊನೇ ಕ್ಷಣ ಬ್ಯಾಟಿಂಗ್​

ಮೊದಲು ಬ್ಯಾಟ್​ ಮಾಡಿದ ನೆದರ್ಲ್ಯಾಂಡ್ಸ್​ ತಂಡ ಎಂದಿನಂತೆಯೇ ಪೇಲವ ಪ್ರದರ್ಶನ ನೀಡಿರು. 71 ರನ್​ಗಳಿಗೆ ತಂಡದ ಮೊದಲ ಐದು ವಿಕೆಟ್​ಗಳು ಉರುಳಿದವು. 91 ರನ್​ಗಳಿಗೆ ಆರನೇ ವಿಕೆಟ್​ ಕೂಡ ಪತನಗೊಂಡಿತು. ಈ ಡಚ್ಚರ ಬಳಗ 150 ರನ್​ಗೆ ಸೀಮಿತಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸೈಬ್ರಾಂಡ್​ (70) ಹಾಗೂ ಲೋಗೊನ್ ವ್ಯಾನ್​ ಬೀಕ್​ (59) ಏಳನೇ ವಿಕೆಟ್​ಗೆ 130 ರನ್​ಗಳ ಜತೆಯಾಟವಾಡಿದರು. ಇವರಿಬ್ಬರ ರನ್​ ಗಳಿಕೆ ನೆರವಿನಿಂದ ಆಲ್​ಔಟ್ ಆಗುವ ಮೊದಲು 262 ರನ್ ಬಾರಿಸಿತು. ಲಂಕಾ ಪರ ಮದುಶಂಕಾ ಹಾಗೂ ಕಸುನ್ ರಜಿತಾ ತಲಾ 4 ವಿಕೆಟ್​ ಉರುಳಿಸಿದರು.

Exit mobile version