ನವ ದೆಹಲಿ: ಏಷ್ಯಾ ಕಪ್ 2023ರ ವೇಳಾಪಟ್ಟಿ ಬಿಡುಗಡೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ತಮ್ಮ ಜಿದ್ದು ಬಿಟ್ಟರೆ ವೇಳಾಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳಬಹುದು. ಒಂದು ವೇಳೆ ಪ್ರಸ್ತಾಪ ಮಾಡಿರುವಂತೆಯೇ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆದರೆ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈಗಾಗಲೇ ಟಿಕೆಟ್ ಮಾರಾಟಕ್ಕೆ ವಿಭಿನ್ನ ಯೋಜನೆಯೊಂದನ್ನು ಮಾಡಿಕೊಂಡಿದೆ. ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಲು ಶ್ರೀಲಂಕಾಕ್ಕೆ ಪ್ರಯಾಣಿಸುವ ಅಭಿಮಾನಿಗಳು ಡಾಲರ್ ಹಣವನ್ನು ಪಾವತಿ ಮಾಡುವ ಮೂಲಕ ಟಿಕೆಟ್ ಖರೀದಿ ಮಾಡಬೇಕು ಎಂದು ಹೇಳಲಿದೆ.
ಹೈಬ್ರಿಡ್ ಮಾದರಿಯನ್ನು ಅನುಸರಿಸಲಿದ್ದು ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ ಉಳಿದ 9 ಪಂದ್ಯಗಳು ನಡೆಯಲಿವೆ. ಹೀಗಾಗಿ ಪಂದ್ಯ ನೋಡಲು ಲಂಕಾಗೆ ಹೋಗುವ ಅಭಿಮಾನಿಗಳು ಡಾಲರ್ಗಳಲ್ಲಿ ಟಿಕೆಟ್ಗಳನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದ ತಮ್ಮ ದೇಶದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂಬುದಾಗಿ ಅಲ್ಲಿನ ಕ್ರಿಕೆಟ್ ಸಂಸ್ಥೆ ಹೇಳಿದೆ.
ಕಳೆದ ವರ್ಷ ದ್ವೀಪ ರಾಷ್ಟ್ರ ಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಸಾರ್ವಕಾಲಿಕ ಕುಸಿತ ಕಂಡಿತ್ತು. ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ಸ್ವಲ್ಪ ದಿನಗಳ ಬಳಿಕ ಆರ್ಥಿಕತೆಗೆ ಉತ್ತೇಜನ ಸಿಕ್ಕಿತ್ತು. ಅಲ್ಲದೆ 2022ರ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಲಂಕಾ ತಂಡ ಕಪ್ ಗೆದ್ದ ನಂತರ ಆರ್ಥಿಕತೆ ಸುಧಾರಣೆ ಹಾದಿ ಹಿಡಿದಿತ್ತು. ಹೀಗಾಗಿ ಈ ಬಾರಿ ಅಲ್ಲಿ ಪಂದ್ಯಗಳು ನಡೆದರೆ ಡಾಲರ್ ರೂಪದಲ್ಲಿ ಟಿಕೆಟ್ ಹಣವನ್ನು ಪಡೆಯುವುದು ಅಲ್ಲಿನ ಕ್ರಿಕೆಟ್ ಮಂಡಳಿಯ ಉದ್ದೇಶವಾಗಿದೆ.
ಏಷ್ಯಾಕಪ್ ಬಗ್ಗೆ ಹಲವು ತಿಂಗಳುಗಳ ಊಹಾಪೋಹಗಳಿಗೆ ತೆರೆ ಎಳೆದಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲೇ ನಡೆಸಲಾಗುವುದು ಎಂದು ಜೂನ್15 ರಂದು ಘೋಷಿಸಿತು. ಇದರಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ ಒಂಬತ್ತು ಪಂದ್ಯಗಳು ನಡೆಯಲಿವೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಟೂರ್ನಿ ಆಯೋಜನೆಗೊಂಡಿದೆ.
ಇದನ್ನೂ ಓದಿ : World Cup 2023 : ಪಾಕ್ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!
ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವುದು. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ ಮತ್ತು ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಯಲಿವೆ ಎಂಬುದಾಗಿ ಎಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಸೂಪರ್ ಫೋರ್ ಹಂತದ ಅಗ್ರ ಎರಡು ತಂಡಗಳು ನಂತರ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಲಾಜಿಸ್ಟಿಕ್ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ನಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ. ನಾವು ಐದನೇ ಪಂದ್ಯವನ್ನು ಪಡೆಯಲು ಶ್ರಮಿಸುತ್ತಿದ್ದೇವೆ. ಇನ್ನೂ ಅದರ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಈ ನಿರ್ಧಾರವನ್ನು ಹಿಂದಿನ ಪಿಸಿಬಿ ಆಡಳಿತವು ತೆಗೆದುಕೊಂಡಿದ್ದರಿಂದ, ಈ ಸಮಯದಲ್ಲಿ ಇದು ಕಠಿಣ ಕೆಲಸವಾಗಿದೆ ಎಂದು ಪಿಸಿಬಿ ಮೂಲಗಳು ಜಿಯೋ ನ್ಯೂಸ್ಗೆ ತಿಳಿಸಿದೆ.