ಗೀಲಾಂಗ್: ಜಾನ್ ಫ್ರೈಲಿಂಕ್ ಅವರ ಆಲ್‌ರೌಂಡರ್ ಆಟದ ನೆರವಿನಿಂದ ನಮೀಬಿಯಾ ತಂಡ ಟಿ20 ವಿಶ್ವಕಪ್ (T20 World Cup) ಟೂರ್ನಿಯ ಮೊದಲ ಸುತ್ತಿನ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಸೈಮಂಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನಮೀಬಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸವಾಲೊಡ್ಡಿತು. ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾ 19 ಓವರ್ಗಳಲ್ಲಿ 108 ರನ್ಗೆ ಸರ್ವಪತನ ಕಂಡಿತು.
ಚೇಸಿಂಗ್ ವೇಳೆ ನಮೀಬಿಯಾ ತಂಡದ ಬೌಲರ್‌ಗಳ ಶಿಸ್ತುಬದ್ಧ ದಾಳಿಯನ್ನು ಎದುರಿಸುವಲ್ಲಿ ಶ್ರೀಲಂಕಾ ಸಂಪೂರ್ಣ ವಿಫಲಗೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಭಾನುಕ ರಾಜಪಕ್ಷ 21 ಎಸೆತಗಳಲ್ಲಿ 20 ರನ್ ಹಾಗೂ ನಾಯಕ ದಸುನ್ ಶನಕ 23 ಎಸೆತಗಳಲ್ಲಿ 29 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್ಗಳು ಸಂಪೂರ್ಣ ವಿಫಲರಾದರು. ನಮೀಬಿಯಾ ಪರ ಕರಾರುವಾಕ್ ಬೌಲಿಂಗ್ ಪ್ರದರ್ಶನ ತೋರಿದ ಡೇವಿಡ್ ವೈಸ್, ಬೆರ್ನಾರ್ಡ್ ಸ್ಕಾಡ್ಜ್, ಬೆನ್ ಶಿಕಾಂಗ್ ಹಾಗೂ ಫ್ರೈಲಿಂಕ್ ತಲಾ ಎರಡೆರಡು ವಿಕೆಟ್ ಕಬಳಿಸಿದರು. ನಮೀಬಿಯಾ ಪರ ಜಾನ್ ಫ್ರೈಲಿಂಗ್ 28 ಎಸೆತಗಳಿಂದ 44 ರನ್ ಮತ್ತು ಎರಡು ವಿಕೆಟ್ ಉರುಳಿಸಿ ಆಲ್ರೌಂಡ್ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಂತೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಸ್ಕೋರ್ ವಿವರ
ನಮೀಬಿಯಾ: 20 ಓವರ್‌ಗೆ 163-7 (ಜಾನ್ ಫ್ರೈಲಿಂಗ್ 44, ಜೆಜೆ ಸ್ಮಿತ್ ಅಜೇಯ 31 ; ಪ್ರಮೋದ್ ಮಧುಶನ್ 37ಕ್ಕೆ 2,ವಾನಿಂದು ಹಸರಂಗ 27ಕ್ಕೆ 1, ಮಹೇಶ ತೀಕ್ಷಣ 23ಕ್ಕೆ 1)
ಶ್ರೀಲಂಕಾ: 19 ಓವರ್‌ಗೆ 108-10 ( ದಸುನ್ ಶನಕ 29, ಭಾನುಕ ರಾಜಪಕ್ಷ 20; ಜಾನ್ ಫ್ರೈಲಿಂಗ್ 26ಕ್ಕೆ 2, ಬೆನ್ ಶಿಕಾಂಗ್ 22ಕ್ಕೆ 2, ಬೆರ್ನಾರ್ಡ್ ಸ್ಕಾಡ್ಜ್ 18ಕ್ಕೆ 2, ಡೇವಿಡ್ ವೀಸ್ 16ಕ್ಕೆ 2)
ಇದನ್ನೂ ಓದಿ | T20 World Cup | ವಿಶ್ವ ಕಪ್‌ನ ಮೊದಲ ಹಂತದ ತಂಡಗಳು, ತಾಣ, ಗುಂಪು ಇವೆಲ್ಲದರ ಕುರಿತು ಇಲ್ಲಿದೆ ಮಾಹಿತಿ