Site icon Vistara News

ಭಾರತದ ವಿರುದ್ಧ ಹೀನಾಯ ಸೋಲು: ಶ್ರೀಲಂಕಾ ಕ್ರಿಕೆಟ್ ಮಂಡಳಿ ವಜಾ

Sri Lanka Cricket

ಕೊಲಂಬೊ: ಹಾಲಿ ಆವೃತ್ತಿಯ ವಿಶ್ವಕಪ್​​ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ ಅತ್ಯಂತ ಹೀನಾಯ ಸೋಲು ಕಂಡಿತ್ತು. ಇದೀಗ ಈ ಸೋಲಿಗೆ ರಾಷ್ಟ್ರೀಯ ಕ್ರಿಕೆಟ್‌(Sri Lanka Cricket Board) ಮಂಡಳಿಯನ್ನು ವಜಾಗೊಳಿಸಿ(Sri Lanka Sack Entire Cricket Board) ಶ್ರೀಲಂಕಾದ ಕ್ರೀಡಾ ಸಚಿವ ರೋಷನ್‌ ರಣಸಿಂಘೆ(Roshan Ranasinghe) ಅವರು ಸೋಮವಾರ ಆದೇಶಿಸಿದ್ದಾರೆ.

ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ 1996ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ(Arjuna Ranatunga) ಅವರನ್ನು ನೇಮಕ ಮಾಡಲಾಗಿದೆ. ನೆವೆಂಬರ್ 2 ರಂದು ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ನೀಡಿದ 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು, 302ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

ಅರ್ಜುನ ರಣತುಂಗ ಮಧ್ಯಂತರ ಅಧ್ಯಕ್ಷ

ಈ ಸೋಲಿನಿಂದ ಕೆರಳಿದ್ದ ರಣಸಿಂಘೆ ಅವರು ಕ್ರಿಕೆಟ್​ ಮಂಡಳಿಯ ಪದಾಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದರು. ನಿಮಗೆ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ನುಡಿದಿದ್ದರು. ಅಲ್ಲದೆ ತಮ್ಮ ಹುದ್ದಗೆ ತಕ್ಷಣ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಮಂಡಳಿಯನ್ನು ವಜಾಗೊಳಿಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಅರ್ಜುನ ರಣತುಂಗ ಅವರಿಗೆ ಅಧಿಕಾರ ನೀಡಲಾಗಿದೆ.

ಏಷ್ಯಾಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿಯೂ ಲಂಕಾ ತಂಡ ಭಾರತ ಎದುರು ಕೇವಲ 50 ರನ್​ಗೆ ಆಲೌಟ್​ ಆಗಿ ಹೀನಾಯ ಸೋಲು ಕಂಡಿತ್ತು. ಈ ವೇಳೆಯೂ ರಣಸಿಂಘೆ ಅವರು ಕ್ರಿಕೆಟ್​ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಎಚ್ಚರಿಕೆಯನ್ನೂ ನೀಡಿದ್ದರು. ವಿಶ್ವಕಪ್​ನಲ್ಲಿಯೂ ಇದೇ ಪ್ರದರ್ಶನ ಮುಂದುವರಿದ ಕಾರಣ ಮಂಡಳಿಯನ್ನೇ ವಜಾಗೊಳಿಸಲಾಗಿದೆ.

ಇದನ್ನೂ ಓದಿ Virat Kohli: ಲಂಕಾದ ದಿಗ್ಗಜ ಬ್ಯಾಟರ್​ನ ವಿಶ್ವಕಪ್ ದಾಖಲೆ ಮುರಿದ ಕಿಂಗ್​ ಕೊಹ್ಲಿ

ಇಂದು ಬಾಂಗ್ಲಾ ಎದುರಾಳಿ

ಸದ್ಯ ಶ್ರೀಲಂಕಾ ತಂಡ ಹಾಲಿ ವಿಶ್ವಕಪ್​ನಲ್ಲಿ 7 ಪಂದ್ಯಗಳನ್ನು ಆಡಿದ್ದು 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇಂದು ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದೆ. ಒಂದೊಮ್ಮೆ ಈ ಪಂದ್ಯದಲ್ಲೂ ಸೋತರೆ ಲಂಕಾ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಲಂಕಾ ನಾಯಕನ ದರ್ಪದ ಮಾತು

ವಿರಾಟ್​ ಕೊಹ್ಲಿ(Virat Kohli) ಅವರು ದಕ್ಷಿಣ ಆಫ್ರಿಕಾ(South Africa) ವಿರುದ್ಧ ಶತಕ ಬಾರಿಸುವ ಮೂಲಕ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ 49ನೇ(49th ODI hundred) ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ಕೊಹ್ಲಿಯ ಈ ಸಾಧನೆಗೆ ಸ್ವತಃ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನದ ಆಟಗಾರರು ಕೂಡ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದರು. ಆದರೆ ಶ್ರೀಲಂಕಾದ ನಾಯಕ ಕುಸಾಲ್ ಮೆಂಡಿಸ್(Kusal Mendis) ಅಭಿನಂದನೆ ಸಲ್ಲಿಸುವುದನ್ನು ನಿರಾಕರಿಸಿದ್ದರು.

ಶ್ರೀಲಂಕಾ ತಂಡ ಇಂದು(ಸೋಮವಾರ) ವಿಶ್ವಕಪ್​ನ ​38ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯ ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅಂದರೆ ಭಾನುವಾರ ಸುದ್ದಿಗೋಷ್ಠಿ ನಡೆದಿತ್ತು. ಇದೇ ವೇಳೆ ಲಂಕಾದ ನಾಯಕ ಕುಸಾಲ್ ಮೆಂಡಿಸ್​ಗೆ ಪತ್ರಕರ್ತರೊಬ್ಬರು 49ನೇ ಶತಕ ಬಾರಿಸಿದ ವಿರಾಟ್​ ಕೊಹ್ಲಿಗೆ ನೀವು ಅಭಿನಂದನೆ ಸಲ್ಲಿಸುತ್ತೀರಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮೆಂಡಿಸ್​, ನಾನೇಕೆ ಅವರನ್ನು ಅಭಿನಂದಿಸಬೇಕು? ಎಂಬ ದರ್ಪದ ಉತ್ತರ ನೀಡಿದ್ದರು.

Exit mobile version