ಶಾರ್ಜಾ : ಏಷ್ಯಾ ಕಪ್‌ನ ಸೂಪರ್-೪ ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫಘಾನಿಸ್ತಾನ ತಂಡವನ್ನು ೪ ವಿಕೆಟ್‌ಗಳಿಂದ ಸೋಲಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಹಣಾಹಣಿಯಲಿ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ ತನ್ನ ಪಾಲಿನ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೭೫ ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಲಂಕಾ ಬಳಗ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ೬ ವಿಕೆಟ್ ನಷ್ಟಕ್ಕೆ ೧೭೯ ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ಲಂಕಾ ಬಳಗ ಏಷ್ಯಾ ಕಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿತು. ಈ ಹಿಂದೆ ಗುಂಪು ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ವೀರೋಚಿತ ೨ ವಿಕೆಟ್‌ಗಳ ಜಯ ದಾಖಲಿಸಿತು.
ಟಾಸ್ ಗೆದ್ದ ಲಂಕಾ ತಂಡ ಅಫಘಾನಿಸ್ತಾನ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನ ನೀಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ರಹಮನುಲ್ಲಾ ಗುರ್ಬಜ್ ೪೫ ಎಸೆತಗಳಲ್ಲಿ ೬ ಸಿಕ್ಸರ್ ಹಾಗೂ ೪ ಫೋರ್‌ಗಳ ಸಮೇತ ೮೪ ರನ್ ಬಾರಿಸಿದರೆ, ಇಬ್ರಾಹಿಮ್ ಜದ್ರಾನ್ ೪೦ ರನ್ ಬಾರಿಸಿದರು. ಇವರಿಬ್ಬರ ಆಟದ ವೇಳೆ ಅಫಘಾನಿಸ್ತಾನ ತಂಡ ೨೦೦ ರನ್‌ಗಳ ಸಮೀಪ ಹೋಗುವ ಲಕ್ಷಣ ತೋರಿತು. ಆದರೆ, ಕೊನೇ ಹಂತದಲ್ಲಿ ವಿಕೆಟ್ ಕಳೆದುಕೊಂಡ ಕಾರಣ ರನ್ ಗಳಿಕೆಗೆ ಕಡಿವಾಣ ಬಿತ್ತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡವೂ ಉತ್ತಮ ಅರಂಭ ಪಡೆಯಿತು. ಪಾಥುಮ್ ನಿಸ್ಸಾಂಕ ೩೫ ರನ್ ಬಾರಿಸಿದರೆ, ಕುಸಾಲ್ ಮೆಂಡಿಸ್ ೩೬ ರನ್ ಕಲೆ ಹಾಕಿದರು. ಧನುಷ್ಕಾ ಗುಣತಿಲಕ ೩೩ ರನ್ ಪೇರಿಸಿದರೆ, ಭಾನುಕಾ ರಾಜಪಕ್ಸ ೧೪ ಎಸೆತಗಳಲ್ಲಿ ೩೧ ರನ್ ಕಲೆ ಹಾಕಿ ತಂಡದ ಜಯವನ್ನು ಸುಲಭಗೊಳಿಸಿದರು.
ಇದನ್ನೂ ಓದಿ | Ind vs Pak | ಅಗ್ರ ಕ್ರಮಾಂಕದ ಬ್ಯಾಟಿಂಗ್, ಡೆತ್ ಓವರ್ ಬೌಲಿಂಗ್ ಸುಧಾರಣೆಗೆ ಭಾರತ ತಂಡದ ಒತ್ತು