Site icon Vistara News

Asia Cup | ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ ತಂಡ

asia cup

ದುಬೈ : ಏಷ್ಯಾ ಕಪ್‌ (Asia Cup) ಸೂಪರ್‌-೪ ಹಂತದ ಕೊನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಶ್ರೀಲಂಕಾ ತಂಡ ೫ ವಿಕೆಟ್‌ಗಳಿಂದ ಸೋಲಿಸಿದೆ. ಎರಡೂ ತಂಡಗಳು ಈಗಾಗಲೇ ಫೈನಲ್‌ಗೇರಿರುವ ಕಾರಣ ಈ ಪಂದ್ಯಕ್ಕೆ ಹೆಚ್ಚಿನ ಕಿಮ್ಮತ್ತು ಇರಲಿಲ್ಲ. ಆದರೂ, ಕೆಚ್ಚೆದೆಯ ಪ್ರದರ್ಶನ ತೋರಿದ ಲಂಕಾ ಬಳಗ ಪಾಕಿಸ್ತಾನ ತಂಡವನ್ನು ಅಧಿಕಾರಯುತವಾಗಿ ಮಣಿಸಿತು.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟ್‌ ಮಾಡಲು ಆಹ್ವಾನ ಪಡೆದ ಪಾಕಿಸ್ತಾನ ತಂಡ ೧೯.೧ ಓವರ್‌ಗಳಲ್ಲಿ ೧೨೧ ರನ್‌ಗಳಿಗೆ ಆಲ್ಔಟ್‌ ಆಯಿತು. ಸಣ್ಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿ ವಿಕೆಟ್‌ ಕಳೆದಕೊಂಡ ಹೊರತಾಗಿಯೂ ಪಾಥುಮ್‌ ನಿಸ್ಸಂಕ (೫೫*) ಅವರ ಅಜೇಯ ಅರ್ಧ ಶತಕದ ನೆರವಿನೊಂದಿಗೆ ೧೭ ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೧೨೪ ರನ್‌ ಬಾರಿಸಿ ಜಯಶಾಲಿಯಾಯಿತು.

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ವಾನಿಂದು ಹಸರಂಗ (೨೧ಕ್ಕೆ೩) ಹಾಗೂ ಪ್ರಮೋದ್ ಮಧುಶನ್‌ (೨೧ಕ್ಕೆ೨) ಹಾಗೂ ಮಹೀಶ್‌ ತೀಕ್ಷಣ (೨೧ಕ್ಕೆ೨) ಮಾರಕ ದಾಳಿಗೆ ಬೆಚ್ಚಿತು. ನಾಯಕ ಬಾಬರ್‌ ಅಜಮ್‌ ೩೦ ಬಾರಿಸಿದರೆ, ಮೊಹಮ್ಮದ್‌ ನವಾಜ್‌ ೨೬ ರನ್‌ ಬಾರಿಸಿದ್ದು ಹೊರತುಪಡಿಸಿ ಮಿಕ್ಕವರು ಬೇಗ ವಿಕೆಟ್ ಒಪ್ಪಿಸಿದರು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ಬಳಗೂ ಆರಂಭದಲ್ಲಿ ಹಿನ್ನಡೆಗೆ ಒಳಗಾಯಿತು. ಬಳಿಕ ನಿಸ್ಸಂಕ (೫೫), ಭಾನುಕಾ ರಾಜಪಕ್ಷ (೨೪), ದಸುನ್‌ ಶನಕ (೨೧) ಅವರು ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಜಯ ಸಾಧಿಸಿದರು.

ಇತ್ತಂಡಗಳ ನಡುವೆ ಸೋಮವಾರ ಏಷ್ಯಾ ಕಪ್‌ ಫೈನಲ್‌ ಪಂದ್ಯ ನಡೆಯಲಿದೆ.

ಸ್ಕೋರ್‌ ವಿವರ

ಪಾಕಿಸ್ತಾನ: ೧೯.೧ ಓವರ್‌ಗಳಲ್ಲಿ ೧೨೧ (ಬಾಬರ್ ಅಜಮ್‌ ೩೦, ಮೊಹಮ್ಮದ್‌ ನವಾಜ್‌ ೨೬; ವಾನಿಂದು ಹಸರಂಗ ೨೧ಕ್ಕೆ೩, ಪ್ರಮೋದ್‌ ಮದುಶಾನ್‌ ೨೧ಕ್ಕೆ೨, ಮಹೀಶ್‌ ತೀಕ್ಷಣ ೨೧ಕ್ಕೆ೨).

ಶ್ರೀಲಂಕಾ : ೧೭ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೨೪ (ಪಾಥುಮ್‌ ನಿಸ್ಸಂಕ ೫೫*, ಭಾನುಕಾ ರಾಜಪಕ್ಷ ೨೪, ಹ್ಯಾರಿಸ್‌ ರವೂಫ್‌ ೧೯ಕ್ಕೆ೨).

ಇದನ್ನೂ ಓದಿ | Virat kohli | ವಿರಾಟ್‌ ಕೊಹ್ಲಿಗೆ ಸ್ಮರಣೀಯವಾಗಲಿದೆ ದುಬೈ ಪಿಚ್‌, ಇಲ್ಲಿದೆ ನೋಡಿ ಕಾರಣಗಳು

Exit mobile version