ಸಿಲ್‌ಹಟ್: ಮಹಿಳೆಯರ ಏಷ್ಯಾ ಕಪ್‌ನ (Women’s Asia Cup) ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ೧ ರನ್‌ಗಳ ರೋಚಕ ಜಯ ದಾಖಲಿಸಿದ ಶ್ರೀಲಂಕಾ ತಂಡ ಫೈನಲ್‌ಗೇರಿದೆ. ಈ ಮೂಲಕ ಲೀಗ್ ಹಂತದ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ್ದ ಬಿಸ್ಮಾ ಮರೂಫ್ ನಾಯಕತ್ವದ ಪಾಕ್ ತಂಡವನ್ನು ಟೂರ್ನಿಯಿಂದಲೇ ಹೊರಗಟ್ಟಿದೆ ಲಂಕಾ ಪಡೆ.
ಸಿಲ್‌ಹಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೨೨ ರನ್ ಬಾರಿಸಿತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಕೊನೇ ಎಸೆತದ ತನಕ ಹೋರಾಡಿ ೬ ವಿಕೆಟ್ ನಷ್ಟಕ್ಕೆ ೧೨೧ ರನ್ ಬಾರಿಸಿ ಸೋಲಿಗೆ ಒಳಗಾಯಿತು. ಕೊನೇ ಓವರ್‌ನಲ್ಲಿ ಪಾಕ್ ತಂಡದ ಗೆಲುವಿಗೆ ೯ ರನ್‌ಗಳು ಬೇಕಾಗಿದ್ದವು. ಆದರೆ, ಏಳು ರನ್ ಮಾತ್ರ ಪೇರಿಸಲು ಶಕ್ತಗೊಂಡು ನಿರಾಸೆ ಎದುರಿಸಿತು.
ಶನಿವಾರ ಏಷ್ಯಾ ಕಪ್‌ನ ಫೈನಲ್ ಪಂದ್ಯ ನಡೆಯಿದ್ದು, ಭಾರತ ಹಾಗೂ ಲಂಕಾ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ.
ಲಂಕಾ ಪರ ಹರ್ಷಿತಾ ಸಮರವಿಕ್ರಮೆ ೩೫ ರನ್ ಬಾರಿಸಿದರೆ ಅನುಷ್ಕಾ ಸಂಜೀವಿನಿ ೨೬ ರನ್ ಬಾರಿಸಿದರು. ಪಾಕಿಸ್ತಾನ ತಂಡದ ಪರ ನಾಯಕ ಬಿಸ್ಮಾ ಮರೂಫ್ ೪೨ ರನ್ ಬಾರಿಸಿದರೆ, ನಿದಾ ದರ್ ೨೬ ರನ್ ಬಾರಿಸಿದರು.