ಬೆಂಗಳೂರು: ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ (ಆರ್ಎಫ್ವೈಎಸ್)ವತಿಯಿಂದ ಬೆಂಗಳೂರಿನ ಗ್ರೀನ್‌ವುಡ್ ಹೈನಲ್ಲಿ 2023-24ರ ಸಾಲಿನ ಫುಟ್ಬಾಲ್ ಟೂರ್ನಿ (Football Tournament) ಆಯೋಜಿಸಲಾಗಿತ್ತು. ಇದರ 21 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸೇಂಟ್ ಜೋಸೆಫ್ಸ್ ಕಾಲೇಜು (ಆಟೋನೋಮಸ್) ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಸೇಂಟ್ ಜೋಸೆಫ್ ಕಾಲೇಜು ತಂಡ ಫೈನಲ್ನಲ್ಲಿ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ತಂಡವನ್ನು 1-0 ಗೋಲ್ಗಳ ಅಂತರದಿಂದ ಸೋಲಿಸಿ ಟ್ರೋಫಿ ಗೆದ್ದಿತು.
ವಿಜೇತ ತಂಡ ಕೋಚ್ ಲಾರೆನ್ಸ್ ರೋಡ್ರಿಗಸ್ ಮಾತನಾಡಿ, ‘ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ (ಆರ್ಎಫ್ವೈಎಸ್) ಟೂರ್ನಿಯಲ್ಲಿ ಅದ್ಭುತ ಅನುಭವ ದೊರೆಯಿತು. ನಮ್ಮ ತಂಡಕ್ಕೂ ಇದೊಂದು ಉತ್ತಮ ಅನುಭವ. ನಾವು ಸುಮಾರು 9-10 ಪಂದ್ಯಗಳನ್ನು ಆಡಿ ಇದೀಗ ಈಗ ಚಾಂಪಿಯನ್ ಆಗಿದ್ದೇವೆ. ಆರ್ಎಫ್ವೈಎಸ್ ನಮಗೆ ಉತ್ತಮ ಅವಕಾಶವನ್ನು ನೀಡಿತು. ಎಲ್ಲಾ ತಂಡಗಳಿಗೆ ಉತ್ತಮ ಅವಕಾಶ ನೀಡಲಾಗಿದೆ. ಎರಡನೇ ಬಾರಿಗೆ ಈ ಟ್ರೋಫಿ ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದು ಹೇಳಿದರು.
17 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸ್ಪೋರ್ಟ್ಸ್ ಸ್ಕೂಲ್ ತಂಡ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ವಿದ್ಯಾನಗರದ ಸರ್ಕಾರಿ ಸ್ಪೋರ್ಟ್ಸ್ ಹೈಸ್ಕೂಲ್ ತಂಡವನ್ನು 4-1ರಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. 15 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸರ್ಕಾರಿ ಸ್ಪೋರ್ಟ್ಸ್ ಹೈಸ್ಕೂಲ್ ತಂಡ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಫೈನಲ್ ಪಂದ್ಯ ನಿಗದಿತ ಸಮಯದಲ್ಲಿ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡ ಬಳಿಕ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಸರ್ಕಾರಿ ಕ್ರೀಡಾ ಹೈಸ್ಕೂಲ್ ತಂಡ ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್ ತಂಡವನ್ನು ಮಣಿಸಿತು.
ಸೇಂಟ್ ಕ್ಲಾರೆಟ್ ಕಾಲೇಜು ತಂಡಕ್ಕೆ ಟ್ರೋಫಿ
19 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸೇಂಟ್ ಕ್ಲಾರೆಟ್ ಪಿಯು ಕಾಲೇಜು ತಂಡ ಲೀಗ್ ಹಂತದ ಪಂದ್ಯದಲ್ಲಿ ಸೇಂಟ್ ಅಲೋಶಿಯಸ್ ಪ್ರಿ ಯೂನಿವರ್ಸಿಟಿ ಕಾಲೇಜಿನ ವಿರುದ್ಧ ಜಯಗಳಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿತು. ಇದೇ ರೀತಿ, ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್)ತಂಡ ಸೇಂಟ್ ಕ್ಲಾರೆಟ್ ಪಿಯು ಕಾಲೇಜು ವಿರುದ್ಧ 2-0 ಗೋಲುಗಳ ಅಂತರದಿಂದ ಜಯಗಳಿಸಿ ಇದೇ ವಯೋಮಿತಿ ವಿಭಾಗದಲ್ಲಿ ತನ್ನ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ಇದನ್ನೂ ಓದಿ : Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್
15 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಲೇಕ್ ಮಾಂಟ್‌ಫೋರ್ಟ್ ತಂಡವೂ 2023-24ರ ಆರ್ಎಫ್ವೈಎಸ್ ಚಾಂಪಿಯನ್ಷಿಪ್ನ ಬೆಂಗಳೂರು ಚರಣದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಲೇಕ್ ಮಾಂಟ್‌ಫೋರ್ಟ್ ತಂಡ ಫೈನಲ್ನಲ್ಲಿ ಕುಂದಹಳ್ಳಿಯ ರಿಯಾನ್ ಇಂಟರ್‌ನ್ಯಾಶನಲ್ ಸ್ಕೂಲ್ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿತು.