ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ (INDvsAUS) ಮೊದಲ ಪಂದ್ಯ ಆರಂಭಗೊಂಡಿದೆ. ಫೆಬ್ರವರಿ 9ರಂದು ಆರಂಭಗೊಂಡ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಪ್ರವಾಸಿ ತಂಡವನ್ನು 177 ರನ್ಗಳಿಗೆ ಆಲ್ಔಟ್ ಮಾಡಿರುವ ಭಾರತದ ಬೌಲರ್ಗಳು ದಿನವಿಡಿ ಮೆರೆದಾಡಿದ್ದರೆ, ರೋಹಿತ್ ಶರ್ಮಾ (56) ಅವರ ಅರ್ಧ ಶತಕದ ಮೂಲಕ ತಂಡದ ಮುನ್ನಡೆ ಹಾದಿಯಲ್ಲಿದೆ. ಏತನ್ಮಧ್ಯೆ, ಸರಣಿ ಆರಂಭವಾಗುವ ಮೊದಲಿನಿಂದಲೂ ಈ ಸರಣಿಯು ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ನಡುವಿನ ಹಣಾಹಣಿ ಎಂದು ಬಿಂಬಿಸಲಾಗಿತ್ತು. ಆದರೆ, ಈ ಹೋಲಿಕೆಯನ್ನು ಆಸ್ಟ್ರೇಲಿಯಾದ ಬ್ಯಾಟರ್ ತಳ್ಳಿ ಹಾಕಿದ್ದು, ಇಂಥ ಮಾತಿಗೆ ಅರ್ಥವಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.
ನಮ್ಮಿಬ್ಬರ ಅಂಥದ್ದೊಂದ ಸ್ಪರ್ಧೆಯಿದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಕೊಹ್ಲಿ ಏನು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ನಾವಿಬ್ಬರು ಆಟಗಾರರು ಅಷ್ಟೆ. ಮೈದಾನಕ್ಕೆ ಇಳಿದ ಮೇಲೆ ಉತ್ತಮ ಪ್ರದರ್ಶನ ನೀಡುವುದಷ್ಟೇ ನಮ್ಮ ಗುರಿ. ನಾವಿಬ್ಬರು ಬಾರಿಸಿದ ರನ್ಗಳು ನಮ್ಮ ತಂಡಗಳ ಜಯಗಳಲ್ಲಿ ಪಾತ್ರವಹಿಸಿವೆ. ನಾನು ಬ್ಯಾಟ್ ಮಾಡುವಾಗ ಯಾರೊ ಒಬ್ಬರ ವಿರುದ್ಧ ಬ್ಯಾಟ್ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳುವುದಿಲ್ಲ ಅಥವಾ ಬೇರೆಯವರ ಜತೆ ಹೋಲಿಕೆ ಮಾಡಿಕೊಂಡು ಗ್ರೌಂಡ್ಗೆ ಇಳಿಯುವುದಿಲ್ಲ. ತಂಡದ ಗೆಲುವಿಗಾಗಿ ಮಾತ್ರ ಉತ್ತಮ ಬ್ಯಾಟಿಂಗ್ ಮಾಡುತ್ತೇನೆ ಎಂದು ಸ್ಮಿತ್ ಹೇಳಿದ್ದಾರೆ.
ಇದನ್ನೂ ಓದಿ: Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!
ಸ್ಮಿತ್ ಹೋಲಿಕೆಯನ್ನು ನಿರಾಕರಿಸಿರಬಹುದು. ಆದರೆ, ಈ ಇಬ್ಬರು ಆಟಗಾರರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 20 ಪಂದ್ಯಗಳ 36 ಇನಿಂಗ್ಸ್ಗಳಲ್ಲಿ 1682 ರನ್ ಬಾರಿಸಿದ್ದಾರೆ. ಅದರಲ್ಲಿ ಏಳು ಶತಕಗಳು ಐದು ಅರ್ಧ ಶತಕಗಲು ಸೇರಿಕೊಂಡಿವೆ. ಅತ್ತ ಸ್ಟೀವ್ ಸ್ಮಿತ್ ಭಾರತ ವಿರುದ್ಧದ 14 ಟೆಸ್ಟ್ ಪಂದ್ಯಗಳಲ್ಲಿ 72.58 ಸರಾಸರಿಯಂತೆ 1742 ರನ್ ಬಾರಿಸಿದ್ದಾರೆ. ಅದರಲ್ಲಿ 8 ಶತಕಗಳು ಸೇರಿಕೊಂಡಿವೆ.