ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಭಾರತ ತಂಡ 1-2 ಅಂತರದಿಂದ ಸೋಲು ಕಂಡಿದೆ. ಹೀಗಾಗಿ ಅಭಿಮಾನಿಗಳೆಲ್ಲರೂ ಟೀಮ್ ಇಂಡಿಯಾದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಬ್ಬೊಬ್ಬರ ಪ್ರದರ್ಶನವನ್ನು ತುಲನೆ ಮಾಡಿಕೊಂಡು ಸೋಲಿಗೆ ಏನು ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಕೆಲವರು ಬುಮ್ರಾ ತಂಡದಲ್ಲಿ ಇಲ್ಲದೇ ಹೋದದ್ದು ಸೋಲಿಗೆ ಕಾರಣ ಎಂದರೆ ಇನ್ನು ಕೆಲವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹಿನ್ನೆಲೆ ಎಂದು ಹೇಳುತ್ತಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಾತನಾಡಿರುವ ಭಾರತ ತಂಡದ ಮಾಜಿ ಹೆಡ್ ಕೋಚ್ ರವಿ ಶಾಸ್ತಿ, ಸದ್ಯಕ್ಕೆ ಎಲ್ಲರೂ ಸುಮ್ಮನಿರಿ, ಭಾರತ ತಂಡ ಮುಂಬರುವ ಏಕ ದಿನ ವಿಶ್ವ ಕಪ್ (World Cup 2023) ಗೆದ್ದು ತೋರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಇನ್ನೀಗ ಐಪಿಎಲ್ ಹಂಗಾಮ. ಅದು ಮುಗಿದ ಬಳಿಕ ಭಾರತ ತಂಡದ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಕಣಕ್ಕೆ ಇಳಿಯಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಗಿದ ಬಳಿಕ ಮತ್ತೆ ಏಕ ದಿನ ವಿಶ್ವ ಕಪ್ಗೆ ತಯಾರಿ ನಡೆಯಲಿದೆ. ಬಿಸಿಸಿಐ ಆ ಬಳಿಕವೇ ವಿಶ್ವ ಕಪ್ಗೆ ತಂಡವನ್ನು ಘೋಷಿಸಲಿದೆ. ಅದೇ ರೀತಿ ವಿಶ್ವ ಕಪ್ಗೆ ಮೊದಲು ಪಾಕಿಸ್ತಾನದ ಆತಿಥ್ಯದಲ್ಲಿ ಏಷ್ಯಾ ಕಪ್ ಕೂಡ ಆಯೋಜನೆಗೊಂಡಿದೆ.
ಕ್ರೀಡಾ ಚಾನೆಲ್ ಒಂದರ ಜತೆ ಮಾತನಾಡಿದ ರವಿ ಶಾಸ್ತ್ರಿ, ಭಾರತ ತಂಡ ಕಳೆದ 10 ವರ್ಷದಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡಿದೆ. ಹೀಗಾಗಿ ಮತ್ತೆ ಟ್ರೋಫಿ ಗೆಲ್ಲುವ ಅವಕಾಶ ಸೃಷ್ಟಿಯಾಗಿದೆ. ಅಲ್ಲಿಯ ತನಕ ಜನರು ತಾಳ್ಮೆ ಕಾಪಾಡಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ವಿಶ್ವ ಕಪ್ ಗೆಲ್ಲುವುದಕ್ಕೆ ಲಿಯೋನೆಲ್ ಮೆಸ್ಸಿ ಹಲವು ವರ್ಷ ಕಾದಿದ್ದರು. ಅದೇ ರೀತಿ ಸಚಿನ್ ತೆಂಡೂಲ್ಕರ್ ಆರು ವಿಶ್ವಕಪ್ನಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಭಾರತ ತಂಡವೂ ಸಾಕಷ್ಟು ವರ್ಷಗಳ ಕಾಲ ಕಾದಿದೆ. ಹೀಗಾಗಿ ಮತ್ತೆ ಗೆಲ್ಲುವ ಅವಕಾಶ ಸೃಷ್ಟಿಯಾಗಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ : IND VS AUS: ಸಿಕ್ಸರ್ ಬಾರಿಸಿ ರವಿ ಶಾಸ್ತ್ರಿ ದಾಖಲೆ ಮುರಿದ ವೇಗಿ ಉಮೇಶ್ ಯಾದವ್
ಭಾರತ ತಂಡ ಸತತವಾಗಿ ಐಸಿಸಿ ಟ್ರೋಫಿಯ ಸೆಮಿ ಫೈನಲ್ಸ್ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಸ್ಥಿರ ಪ್ರದರ್ಶನ ನೀಡುತ್ತಿದೆ ಎಂದು ಹೇಳಬಹುದು. ಹೀಗಾಗಿ ಮುಂದಿನ ವಿಶ್ವ ಕಪ್ನಲ್ಲಿ ಗೆಲ್ಲುವ ಅವಕಾಶವಿದೆ ಎಂದು ಹೇಳಿದರು.
ಸಚಿನ್ ತೆಂಡೂಲ್ಕರ್ 24 ವರ್ಷ ಕಾಲ ಕ್ರಿಕೆಟ್ ಆಡಿದ್ದರೂ ಕೊನೇ ಹಂತದಲ್ಲಿ ವಿಶ್ವ ಕಪ್ಗೆ ಭಾಜನರಾದರು. ಅದೇ ರೀತಿ ಲಿಯೋನೆಲ್ ಮೆಸ್ಸಿ ಹಲವಾರು ವರ್ಷಗಳ ಕಾಲ ಅರ್ಜೆಂಟೀನಾ ತಂಡಕ್ಕೆ ಆಡಿದ್ದರು. ಕಳೆದ ವರ್ಷ ಅವರು ಕೋಪಾ ಅಮೆರಿಕ ಹಾಗೂ ವಿಶ್ವ ಕಪ್ ಗೆದ್ದರು. ಅಂತೆಯೇ ಭಾರತ ತಂಡದ ಆಟಗಾರರೂ ಸಾಧನೆ ಮಾಡಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಆ ಸಂದರ್ಭಕ್ಕೆ ಕಾಯಬೇಕು ಎಂದು ರವಿ ಶಾಸ್ತ್ತಿ ನುಡಿದಿದ್ದಾರೆ.