Site icon Vistara News

Road Safety World Series | ಸಚಿನ್‌ ನೇತೃತ್ವದ ಭಾರತ ತಂಡಕ್ಕೆ ದ. ಆಫ್ರಿಕಾ ವಿರುದ್ಧ 61 ರನ್‌ ಜಯ

Road Safety World Series

ಕಾನ್ಪುರ: ಸ್ವುವರ್ಟ್‌ ಬಿನ್ನಿ ಅವರ (೮೨*) ಸ್ಫೋಟಕ ಅರ್ಧ ಶತಕ ಹಾಗೂ ರಾಹುಲ್‌ ಶರ್ಮ (೧೭ಕ್ಕೆ೩) ಅವರ ಮಾರಕ ದಾಳಿಯ ನೆರವು ಪಡೆದ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಇಂಡಿಯಾ ಲೆಜೆಂಡ್ಸ್‌ ತಂಡ ಇಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್‌ ಸೀರಿಸ್‌ನ (Road Safety World Series) ಮೊದಲ ಪಂದ್ಯದಲ್ಲಿ ಸೌತ್‌ ಆಫ್ರಿಕಾ ಲೆಜೆಂಡ್ಸ್‌ ತಂಡದ ವಿರುದ್ಧ ೬೧ ರನ್‌ಗಳ ಭರ್ಜರಿ ವಿಜಯ ಸಾಧಿಸಿದೆ.

ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಟಾಸ್‌ ಗೆದ್ದ ನಾಯಕ ಸಚಿನ್ ಅವರು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್‌ ಮಾಡಿದ ಇಂಡಿಯಾ ಲೆಜೆಂಡ್ಸ್‌ ತಂಡ ನಿಗದಿತ ೨೦ ಓವರ್‌ಗಳಲ್ಲಿ ೪ ವಿಕೆಟ್‌ಗೆ ೨೧೭ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಸೌತ್‌ ಆಫ್ರಿಕಾ ಲೆಜೆಂಡ್ಸ್‌ ತಂಡ ೨೦ ಓವರ್‌ಗಳು ಮುಕ್ತಾಯಗೊಂಡಾಗ ೯ ವಿಕೆಟ್ ನಷ್ಟಕ್ಕೆ ೧೫೬ ರನ್ ಮಾತ್ರ ಪೇರಿಸಿ ಸೋಲೊಪ್ಪಿಕೊಂಡಿತು.

ಭಾರತ ಪರ ಇನಿಂಗ್ಸ್‌ ಆರಂಭಿಸಿದ ನಮನ್‌ ಓಜಾ (೨೧), ಸಚಿನ್‌ ತೆಂಡೂಲ್ಕರ್‌ (೧೬) ಬೇಗನೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸುರೇಶ್‌ ರೈನಾ ೩೩ ರನ್‌ಗಳನ್ನು ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದ ಸ್ಟುವರ್ಟ್‌ ಬಿನ್ನಿ ೪೨ ಎಸೆತಗಳಲ್ಲಿ ೫ ಫೋರ್‌, ೬ ಸಿಕ್ಸರ್‌ಗಳೊಂದಿಗೆ ೮೨ ರನ್‌ ಗಳಿಸಿದರು. ಯುವರಾಜ್‌ ಸಿಂಗ್ ಕೊಡುಗೆ ಕೇವಲ ಆರು ರನ್‌ಗಳು. ಅಂತಿಮವಾಗಿ ಯೂಸುಫ್ ಪಠಾಣ್‌ ೧೫ ಎಸೆತಗಳಲ್ಲಿ ೩೫ ರನ್‌ ಬಾರಿಸಿ ಇಂಡಿಯಾ ಲೆಜೆಂಡ್ಸ್‌ಗೆ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಮಾರಕ ದಾಳಿ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಶುರು ಮಾಡಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ರಾಹುಲ್‌ ಶರ್ಮ (೧೭ಕ್ಕೆ೩), ಪ್ರಜ್ಞಾನ್‌ ಓಜಾ (೩೨ಕ್ಕೆ೨), ಮುನಾಫ್‌ ಪಟೇಲ್‌ (೨೪ಕ್ಕೆ೨) ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ಸೌತ್‌ ಆಫ್ರಿಕಾ ಲೆಜೆಂಡ್ಸ್‌ ತಂಡ ೧೫೬ ರನ್‌ ಬಾರಿಸಲು ಶಕ್ತಗೊಂಡಿತು. ಸೌತ್‌ ಆಫ್ರಿಕಾ ಲೆಜೆಂಡ್ಸ್‌ ಪರ ಜಾಂಟಿ ರೋಡ್ಸ್‌ ೩೮ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಇಂಡಿಯಾ ಲೆಜೆಂಡ್ಸ್‌ ತಂಡ ಬುಧವಾರ ವೆಸ್ಟ್‌ ಇಂಡೀಸ್‌ ಲೆಜೆಂಡ್ಸ್‌ ತಂಡವನ್ನು ಎದುರಿಸಲಿದೆ.

ಸ್ಕೋರ್‌ ವಿವರ

ಇಂಡಿಯಾ ಲೆಜೆಂಡ್ಸ್‌ : ೨೦ ಓವರ್‌ಗಳಲ್ಲಿ ೪ ವಿಕೆಟ್‌ಗೆ ೨೧೭ (ಸ್ಟುವರ್ಟ್‌ ಬಿನ್ನಿ ೮೨*, ಯೂಸುಫ್‌ ಪಠಾಣ್‌ ೩೫*, ಸುರೇಶ್‌ ರೈನಾ ೩೩, ಜಾನ್‌ ವ್ಯಾನ್‌ ಡೆರ್ ವಾಥ್‌ ೨೮ಕ್ಕೆ೨).

ಸೌತ್‌ ಆಫ್ರಿಕಾ ಲೆಜೆಂಡ್ಸ್‌ : ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೧೫೯ (ಜಾಂಟಿ ರೋಡ್ಸ್‌ ೩೮, ಮಾರ್ನೆ ವ್ಯಾನ್ ೨೬; ರಾಹುಲ್‌ ಶರ್ಮ ೧೭ಕ್ಕೆ೩, ಮುನಾಫ್‌ ಪಟೇಲ್‌ ೨೪ಕ್ಕೆ೨).

Exit mobile version